ಹಿರಿಯ ನಟ ಎಂ.ಎಸ್.ಉಮೇಶ್ ನಿಧನ
ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್. ಉಮೇಶ್(80) ರವಿವಾರ ಬೆಳಗ್ಗೆ ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಉಮೇಶ್ ಇತ್ತೀಚೆಗೆ ಮನೆಯಲ್ಲೇ ಕಾಲುಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.
ಎಪ್ರಿಲ್ 22, 1945ರಲ್ಲಿ ಮೈಸೂರಿನಲ್ಲಿ ಜನಿಸಿದ ಎಂ. ಎಸ್. ಉಮೇಶ್ 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳ ತನಕವೂ ಅವರು ಸಿನೆಮಾಗಳಲ್ಲಿ ನಟಿಸುತ್ತಿದ್ದರು. ಉಮೇಶ್ ಅಭಿನಯಿಸಿದ್ದ ‘ಕಮಲ್ ಶ್ರೀದೇವಿ’, ‘ಐ ಆ್ಯಮ್ ಗಾಡ್’ ಸಿನೆಮಾಗಳು ಇತ್ತೀಚೆಗೆ ಬಿಡುಗಡೆ ಆಗಿದ್ದವು. ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು.
ಕಳಚಿದ ಹಾಸ್ಯದ ಕೊಂಡಿ: ಸಚಿವ ಶಿವರಾಜ ತಂಗಡಗಿ ಸಂತಾಪ
ಕನ್ನಡ ಚಿತ್ರರಂಗದ ಹಿರಿಯ ನಟ ಎಂ ಎಸ್ ಉಮೇಶ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಉಮೇಶ್ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟ, ಬಾಲ ಕಲಾವಿದರಾಗಿ ಮಕ್ಕಳ ರಾಜ್ಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಮ್ಮನ್ನು ರಂಜಿಸಿದ್ದಾರೆ. ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಕನ್ನಡದ ಎಲ್ಲಾ ನಾಯಕ ನಟರ ಜೊತೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಉಮೇಶ್ ಅವರದ್ದು,
ಗುರು ಶಿಷ್ಯರು, ಗೋಲ್ ಮಾಲ್ ರಾಧಾಕೃಷ್ಣ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದಂತಹುದು ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.
ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅತ್ಯುತ್ತಮ ಕಲಾವಿದನನ್ನು ಕಳೆದುಕೊಂಡಿದೆ. ಅವರ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬವರ್ಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.