ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ
ನಟ ಧರ್ಮೇಂದ್ರ (Photo: PTI)
ಮುಂಬೈ: ಬಾಲಿವುಡ್ ದಿಗ್ಗಜ, ಹಿರಿಯ ನಟ ಧರ್ಮೇಂದ್ರ ಅವರು ಸೋಮವಾರ ನಿಧನರಾಗಿದ್ದಾರೆ ಎಂದು IANS ವರದಿ ಮಾಡಿದೆ.
ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಧರ್ಮೇಂದ್ರ ಅವರು ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದರು. ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಆರು ದಶಕಗಳಿಗೂ ಅಧಿಕ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಧರ್ಮೇಂದ್ರ ಅವರು ನೂರಾರು ಚಿತ್ರಗಳಲ್ಲಿ ನಟಿಸಿದ್ದರು. 1960ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ನಟನೆಯ ಬದುಕು ಆರಂಭಿಸಿದ ಅವರು ‘ಫೂಲ್ ಔರ್ ಪತ್ತರ್’, ‘ಮೇರಾ ಗಾಂವ್ ಮೇರಾ ದೇಶ್’, ‘ಶೋಲೇ’, ‘ಯಾದೋನ್ ಕಿ ಬಾರತ್’, ‘ನೌಕರ್ ಬಿವಿ ಕಾ’ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಕೊನೆಯ ಚಿತ್ರ ‘ಇಕ್ಕೀಸ್’ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ.
ಧರ್ಮೇಂದ್ರ ಅವರಿಗೆ 2012ರಲ್ಲಿ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಪಂಜಾಬ್‌ನ ಲುಧಿಯಾನಾದ ಹಳ್ಳಿಯೊಂದರಲ್ಲಿ ಜನಿಸಿದ ಧರ್ಮೇಂದ್ರ ಅವರು 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು. ನಂತರ ನಟಿ ಹೇಮಾ ಮಾಲಿನಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.