ದೈವಕ್ಕೆ ಅವಮಾನ ಆರೋಪ: ವಿವಾದದ ಬೆನ್ನಲ್ಲೆ ಕ್ಷಮೆಯಾಚಿಸಿದ ಬಾಲಿವುಡ್ ನಟ ರಣವೀರ್ ಸಿಂಗ್
ಹೊಸದಿಲ್ಲಿ : ʼಕಾಂತಾರ ಅಧ್ಯಾಯ 1’ ಚಿತ್ರದ ದೈವದ ಪಾತ್ರವನ್ನು ತಮಾಷೆಯಾಗಿ ಅನುಕರಣೆ ಮಾಡಿ ವಿವಾದಕ್ಕೊಳಗಾದ ಬಾಲಿವುಡ್ ನಟ ರಣವೀರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಯಾರದಾದರೂ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ʼಕಾಂತಾರ ಅಧ್ಯಾಯ 1’ ಚಿತ್ರದ ದೈವದ ಪಾತ್ರವನ್ನು ತಮಾಷೆಯಾಗಿ ಅನುಕರಣೆ ಮಾಡಿ ವಿವಾದಕ್ಕೆ ಕಾರಣವಾಗಿದ್ದರು.
ಕಾಂತಾರʼ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ರಣವೀರ್ ಟೀಕೆಗೆ ಗುರಿಯಾಗಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ವ್ಯಾಪಕ ಆಗ್ರಹ ಕೇಳಿ ಬಂದಿತ್ತು. ಕರಾವಳಿಯ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ವಿವಾದದ ಬೆನ್ನಲ್ಲೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ರಣವೀರ್ ಸಿಂಗ್, "ನಾನು ನಮ್ಮ ದೇಶದಲ್ಲಿನ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರದಾದರೂ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.
ಸೋಮವಾರ, ಹಿಂದೂ ಜನಜಾಗೃತಿ ಸಮಿತಿ ಪಣಜಿ ಪೊಲೀಸರಿಗೆ ಈ ಕುರಿತು ದೂರು ನೀಡಿತ್ತು. ರಣವೀರ್ ಸಿಂಗ್ ಚಾಮುಂಡಾದೇವಿ ದೇವಿಯನ್ನು ಅವಮಾನಿಸಿದ್ದಾರೆ. ಚಿತ್ರದಲ್ಲಿನ ದೇವತೆಯ ದೈವಿಕ ರೂಪವನ್ನು ಅನುಕರಿಸಿದ್ದಾರೆ. ಕೋಟಿತುಳು ಸಮುದಾಯದಿಂದ ಪೂಜಿಸಲ್ಪಡುವ ಚಾಮುಂಡಿ ದೈವವನ್ನು "ಹೆಣ್ಣು ದೆವ್ವ" ಎಂದು ಉಲ್ಲೇಖಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.