ಪ್ರೇಮಿಗಳ ಬಾಳಿಗೆ ಬಿದ್ದ ಗುದ್ದು ಮತ್ತು ಗೆದ್ದು ಬೀಗಿದ್ದು..!
ಚಿತ್ರ: ಲವ್ ಯು ಮುದ್ದು
ನಿರ್ದೇಶಕ: ಕುಮಾರ್ ಎಲ್.
ನಿರ್ಮಾಪಕ: ಕಿಶನ್ ಟಿ.ಎನ್.
ತಾರಾಗಣ: ಸಿದ್ದು ಮೂಲಿಮನಿ, ರಾಜೇಶ್ ನಟರಂಗ, ರೇಷ್ಮಾ ಎಲ್. ಮೊದಲಾದವರು.
ಯಾರೋ ಯುವ ಪ್ರೇಮಿಗಳ ಆತ್ಮಹತ್ಯೆಯಿಂದ ಶುರುವಾಗುವ ಕಥೆ. ಆದರೆ ಕೊನೆಯಲ್ಲಿ ಎಂಥ ಸಂದರ್ಭದಲ್ಲೂ ಧೃತಿಗೆಡಬಾರದು ಎನ್ನುವ ಸಂದೇಶ ನೀಡುವ ಪ್ರೇಮಿಗಳು. ಇದು ಪ್ರತಿಯೊಬ್ಬ ಪ್ರೇಕ್ಷಕನಿಗೂ ಸ್ಫೂರ್ತಿ ಎನಿಸಲು ಮುಖ್ಯ ಕಾರಣ ಇದೊಂದು ನೈಜ ಘಟನೆಯ ಆಧಾರಿತ ಚಿತ್ರ ಎನ್ನುವುದೇ ಆಗಿದೆ.
ತಂದೆ ಮತ್ತು ಮಗನ ಆಪ್ತ ಸನ್ನಿವೇಶಗಳೊಂದಿಗೆ ಆರಂಭವಾಗುವ ಕಥೆ. ಅಪ್ಪನ ಎಲ್ಲ ಮಾತುಗಳನ್ನು ಒಪ್ಪುವ ಈ ಸುಪುತ್ರ ಮದುವೆ ವಿಚಾರದಲ್ಲಿ ಮಾತ್ರ ಯಾವ ಹುಡುಗಿಯನ್ನೂ ಮೆಚ್ಚುವುದಿಲ್ಲ. ತನ್ನೊಳಗೆ ಇಷ್ಟ ಮೂಡಿಸುವಂಥ ಹುಡುಗಿ ಸಿಕ್ಕಿಲ್ಲವೆಂದಿರುತ್ತಾನೆ. ಆದರೆ ತಾಯಿಯ ಜನ್ಮದಿನಕ್ಕೆ ಶುಭ ಕೋರಲೆಂದು ಕಾರ್ಕಳದ ಊರಿಗೆ ಹೊರಡುತ್ತಾನೆ. ತನಗೆ ಮೆಚ್ಚುಗೆಯಾಗುವ ಹುಡುಗಿ ತಾಯಿಯಷ್ಟು ಚೆನ್ನಾಗಿರಬೇಕು ಎಂದು ಹೊರಟವನಿಗೆ ತಾಯಿಯ ಊರಲ್ಲೇ ಅಂಥ ಹುಡುಗಿ ಎದುರಾಗುತ್ತಾಳೆ. ಆಕೆಯೊಬ್ಬಳು ಅನಾಥೆ. ಆದರೆ ವೃತ್ತಿಯಲ್ಲಿ ಶಿಕ್ಷಕಿ. ಹೆಸರು ಸುಮತಿ. ಮೊದಲ ನೋಟದಲ್ಲೇ ಪ್ರೀತಿ ಹುಟ್ಟುತ್ತದೆ. ಆಕೆಗೂ ಈತನಲ್ಲೂ ಪ್ರೇಮ ಮೂಡುವಂಥ ಘಟನೆಯೊಂದು ಸಂಭವಿಸುತ್ತದೆ. ಮೆಚ್ಚಿದ ಹುಡುಗಿಯೊಂದಿಗೆ ತಂದೆಗೆ ಅಚ್ಚರಿ ನೀಡಲೆಂದು ಬೆಂಗಳೂರಿಗೆ ಹೊರಟಾಗ ಆ ಘಟನೆ ನಡೆಯುತ್ತದೆ. ಆನಂತರದ ಬದುಕೇ ಚಿತ್ರಕ್ಕೆ ವಿಭಿನ್ನತೆ ತರುವ ಸಂಗತಿ.
ಇದು ಮಹಾರಾಷ್ಟ್ರದ ಆಕಾಶ್ ಮತ್ತು ಅಂಜಲಿಯ ಬದುಕಲ್ಲಿ ನಡೆದ ಕಥೆ ಎಂದು ಈಗಾಗಲೇ ಚಿತ್ರತಂಡವೇ ಹೇಳಿದೆ. ಆ ಪ್ರೇಮಿಗಳು ತಮ್ಮ ಬಾಳಲ್ಲಿ ನಡೆದ ದುರಂತವನ್ನು ಹೇಗೆ ಎದುರಿಸಿದ್ದಾರೆ ಎನ್ನುವುದು ಸೋಶಿಯಲ್ ಮೀಡಿಯಾ ಮೂಲಕ ಎಲ್ಲೆಡೆಯೂ ಸದ್ದಾಗಿರುವ ಸತ್ಯ. ಹೀಗಾಗಿ ಮೂಲ ಕಥೆ ಎನ್ನುವ ಬಗ್ಗೆ ಪ್ರೇಕ್ಷಕರು ಆರಂಭದಲ್ಲೇ ಒಂದು ನಿರೀಕ್ಷೆ ಇಟ್ಟುಕೊಂಡೇ ಬರುತ್ತಾರೆ. ಆದರೆ ಆ ನಿರೀಕ್ಷೆಯನ್ನು ಮೀರುವಂತೆ ಖುಷಿ ಮತ್ತು ಆತಂಕದ ಸನ್ನಿವೇಶಗಳನ್ನು ಸಿನಿಮೀಯವಾಗಿ ಸೇರಿಸಿರುವುದು ನಿರ್ದೇಶಕರ ಜಾಣ್ಮೆಯನ್ನು ತೋರಿಸುತ್ತದೆ.
ಪಾತ್ರಧಾರಿಗಳ ವಿಚಾರಕ್ಕೆ ಬಂದರೆ ಒಬ್ಬ ಪ್ರೇಮಿಯ ಭಾವ ತೀವ್ರತೆಯನ್ನು ಕಟ್ಟಿಕೊಡುವಲ್ಲಿ ನಾಯಕ ನಟ ಸಿದ್ದು ಮೂಲಿಮನಿ ಗೆದ್ದಿದ್ದಾರೆ. ಕರ್ಣ ಎನ್ನುವ ಪಾತ್ರದ ಮೂಲಕ ಕಿರಿಕ್ ಪಾರ್ಟಿಯ ಪ್ರೇಮಿ ಕರ್ಣನನ್ನು ಕೂಡ ನೆನಪಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ರಕ್ಷಿತ್ ರಶ್ಮಿಕಾ ಜೋಡಿಯ ಹಾಡನ್ನು ಚಿತ್ರೀಕರಿಸಲಾದ ಕುಂದಾಪುರದ ಸೇತುವೆಯ ಬಳಿಯಲ್ಲೇ ಹುಡುಗಿಗೆ ಪ್ರಪೋಸ್ ಮಾಡುವ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈ ಕರ್ಣ ಕೂಡ ಶಿಕ್ಷಕಿಯನ್ನು ಪ್ರೇಮಿಸುವ ಒಬ್ಬ ಅಪ್ಪಟ ಪ್ರೇಮಿ ಎನ್ನುವುದರಾಚೆ ಅದಕ್ಕೂ ಇದಕ್ಕೂ ಬೇರೆ ಸಂಬಂಧವೇನೂ ಇಲ್ಲ. ಪ್ರೇಯಸಿ ಸುಮತಿಯಾಗಿ ನವನಟಿ ರೇಷ್ಮಾ ಎಲ್. ಮನ ಗೆಲ್ಲುವ ನಟನೆ ನೀಡಿದ್ದಾರೆ. ಮೊದಲ ಚಿತ್ರದಲ್ಲೇ ಸ್ವಾಭಿಮಾನದ ಯುವತಿಯಾಗಿ, ಮನಸೋಲುವ ಪ್ರೇಯಸಿಯಾಗಿ, ಹೃದಯ ಭಗ್ನಗೊಂಡಾಕೆಯ ನೋವಾಗಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ರೋಗ ಬಾಧಿತೆಯಾಗಿ ರೇಷ್ಮಾ ನೀಡಿರುವ ನಟನೆಯನ್ನು ಮೆಚ್ಚದೇ ಇರಲಾಗದು.
ಕರ್ಣನ ತಂದೆಯ ಪಾತ್ರದಲ್ಲಿ ಕಾಣಿಸಿರುವ ರಾಜೇಶ್ ನಟರಂಗ ತಮ್ಮ ಎಂದಿನ ಸಹಜ ಶೈಲಿಯನ್ನೇ ತೋರಿಸಿದ್ದಾರೆ. ಇದ್ದರೆ ಇಂಥ ತಂದೆಯನ್ನು ಪಡೆದಿರಬೇಕು ಎನ್ನುವ ಭಾವ ಯುವಕರಲ್ಲಿ ಮೂಡುವಂಥ ಪಾತ್ರ. ಆದರೆ ತಂದೆಯ ಸ್ಥಾನದಲ್ಲಿದ್ದುಕೊಂಡು ಆ ಪಾತ್ರಕ್ಕೆ ಎದುರಾಗುವ ಪರೀಕ್ಷೆಗಳು ದೇವರಿಗೇ ಪ್ರೀತಿ.
ಚಿತ್ರದಲ್ಲಿ ಮೇಲ್ನೋಟಕ್ಕೆ ಇಬ್ಬರು ನಾಯಕಿಯರು. ದಿಶಾ ಪಾತ್ರವನ್ನು ನಿರ್ವಹಿಸಿರುವ ಸ್ನೇಹಾ ಸಾವಂತ್ ಡಬಲ್ ಶೇಡ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆರಂಭದಲ್ಲಿ ಕಾಣಿಸಿಕೊಳ್ಳುವ ಶ್ರೀವತ್ಸ ಶ್ಯಾಮ್ ‘ಡಿಂಗ್ ಡಾಂಗ್ ದಿನೇಶ’ನ ಪಾತ್ರದ ಮೂಲಕ ನಗಿಸುತ್ತಾರೆ. ಕೊನೆಯಲ್ಲಿ ರಿಕ್ಷಾ ಚಾಲಕನಾಗಿ ಆಗಮಿಸುವ ಗಿರೀಶ್ ಶಿವಣ್ಣನ ಪಾತ್ರಕ್ಕೆ ಇನ್ನಷ್ಟು ಕಳೆಗಟ್ಟುವ ಸಂಭಾಷಣೆಗಳನ್ನು ನೀಡಬೇಕಿತ್ತು ಅನ್ನಿಸದಿರದು. ಕಥಾಮಧ್ಯದಲ್ಲಿ ಡಾಕ್ಟರ್ ಪಾತ್ರದಲ್ಲಿ ಎಂಟ್ರಿ ನೀಡುವ ಸ್ವಾತಿ ಗುರುದತ್ ವೈದ್ಯಕೀಯ ತಜ್ಞೆಯಂತೆಯೇ ನಟನೆ ನೀಡಿದ್ದಾರೆ. ನಿರ್ದೇಶಕರ ಮೆಚ್ಚಿನ ಕಲಾವಿದರಾಗಿ ಗುರುತಿಸಿಕೊಂಡಿರುವ ತಬಲಾನಾಣಿ ಇಲ್ಲಿಯೂ ಪ್ರಧಾನ ಪೋಷಕ ಪಾತ್ರವನ್ನೇ ನಿಭಾಯಿಸಿದ್ದಾರೆ. ಶಾಲಾ ಸೆಕ್ಯುರಿಟಿಯಾಗಿ ‘ಪಾರಿವಾಳ’ ಎನ್ನುವ ಅಡ್ಡ ಹೆಸರಿನಿಂದ ಕರೆಸಿಕೊಳ್ಳುವ ನಾಣಿಯ ಪಾತ್ರಕ್ಕೆ ಒಂದು ಗಟ್ಟಿ ಹಿನ್ನೆಲೆ ಕೂಡ ನೀಡಲಾಗಿದೆ. ಸಿಕ್ಕ ಅವಕಾಶದಲ್ಲಿ ನಾಣಿಯವರ ಪಾತ್ರದೊಳಗಿನ ಒಳಗೊಳ್ಳುವಿಕೆ ಎದ್ದು ಕಾಣುವಂತಿದೆ.
ಕಥೆಯಲ್ಲಿ ಭೌಗೋಳಿಕವಾಗಿ ನಾಯಕಿಯನ್ನು ಕಾರ್ಕಳದ ಹುಡುಗಿಯಾಗಿ ತೋರಿಸಿದ್ದರೂ ಎಲ್ಲಿಯೂ ಮಂಗಳೂರು ಕರಾವಳಿ ಭಾಷೆಯನ್ನು ಬಳಸಲಾಗಿಲ್ಲ. ಮಾತ್ರವಲ್ಲ ಒಂದೆಡೆ ‘ಮಲೆನಾಡ ಹುಡುಗಿ’ ಎಂದು ಹೇಳಲಾಗಿರುವುದು ವಿಚಿತ್ರ. ನಾಯಕಿಗಷ್ಟೇ ಅಲ್ಲ, ಅಲ್ಲಿನ ಯಾವ ಪಾತ್ರಗಳಲ್ಲೂ ಭಾಷಾ ವ್ಯತ್ಯಾಸ ತೋರಿಸಿಲ್ಲ. ಅದೇ ರೀತಿ ಛಾಯಾಗ್ರಹಣದಲ್ಲಿ ಡ್ರೋನ್ ದೃಶ್ಯಗಳನ್ನು ಪದೇಪದೆ ಅನಗತ್ಯವಾಗಿ ಬಳಸಿದಂತೆ ಕಾಣಿಸಿದೆ. ಉಳಿದಂತೆ ಕನ್ನಡದ ಮಟ್ಟಿಗೆ ‘ಮೈನಾ’ ಚಿತ್ರದ ಬಳಿಕ ಗಂಡಿನ ಪ್ರೇಮದ ಆಳವನ್ನು ಅಷ್ಟೇ ಭಾವುಕವಾಗಿ ತೋರಿಸಿದ ಮತ್ತೊಂದು ಸಿನಿಮಾ ಎನ್ನುವ ಪ್ರಶಂಸೆ ಈ ಚಿತ್ರಕ್ಕೆ ಸಲ್ಲುತ್ತದೆ.