ದೆವ್ವಗಳೊಂದಿಗೆ ಅದೃಷ್ಟ ಪರೀಕ್ಷೆ!
ಚಿತ್ರ: ಜಿ.ಎಸ್.ಟಿ.
ನಿರ್ದೇಶಕ: ಸೃಜನ್ ಲೋಕೇಶ್
ನಿರ್ಮಾಪಕ: ಎನ್. ಸಂದೇಶ್
ತಾರಾಗಣ: ಸೃಜನ್‌ಲೋಕೇಶ್,
ರಜನಿ ಭಾರದ್ವಾಜ್ ಮೊದಲಾದವರು.
ಹುಟ್ಟಿನಿಂದಲೇ ದುರದೃಷ್ಟವಂತ ಎನ್ನುವ ಆಪಾದನೆಗೆ ಒಳಗಾಗಿ ಸಾಯಲು ಹೊರಟ ಯುವಕನ ಕತೆ ಇದು. ಆದರೆ ಸಾಯುವ ಪ್ರಯತ್ನದಿಂದ ಶುರುವಾಗುವ ಕತೆಯನ್ನು ಹಾಸ್ಯಾತ್ಮಕವಾಗಿ ತೋರಿಸಿ ಜೀವನ್ಮುಖಿ ಹಾಸ್ಯಚಿತ್ರವಾಗಿ ನೀಡಿದ್ದಾರೆ ಸೃಜನ್ ಲೋಕೇಶ್.
ಲಕ್ಕಿ ಎನ್ನುವ ಹೆಸರಿದ್ದರೂ ಅನ್‌ಲಕ್ಕಿ ಎನ್ನುವ ಆಪಾದನೆಗೆ ಒಳಗಾದವನು. ಈತ ಹುಟ್ಟಿದಂದೇ ಫ್ಯಾಕ್ಟರಿಗೆ ಬೆಂಕಿಬಿತ್ತೆಂಬ ಸುದ್ದಿ ಬಂದಾಗ ಹೊಟ್ಟೆಯಲ್ಲೇ ಬೆಂಕಿಬಿದ್ದಂತಾಡಿದ್ದರು ತಂದೆ. ಶಾಲೆಗೆ ಕಾಲಿಡುವ ದಿನ ಶಾಲಾ ಕಟ್ಟಡವೇ ಉರುಳಿತ್ತು. ಅಂಗಡಿ ಉದ್ಘಾಟನೆ ಮಾಡಿದಂದೇ ಲಾಕ್‌ಡೌನ್ ಘೋಷಣೆಯಾಗಿತ್ತು. ಅಲ್ಲಿಗೆ ತಂದೆಯ ಪಾಲಿಗೆ ದುರದೃಷ್ಟಕ್ಕೆಲ್ಲ ಲಕ್ಕಿಯೇ ಕಾರಣ ಎನ್ನುವುದು ಸಾಬೀತಾಗಿತ್ತು! ಮಗನ ಮೇಲೆ ಗಂಡ ಮಾಡುವ ಆಪಾದನೆ ತಾಳಲಾಗದೇ ಲಕ್ಕಿ ಜೊತೆ ಮನೆಯಿಂದ ಹೊರನಡೆವ ತಾಯಿ ಮನೆ ಮುಂದೆಯೇ ಅಪಘಾತಗೊಂಡು ಸಾಯುತ್ತಾಳೆ. ಪತ್ನಿಯ ಶವ ಸಂಸ್ಕಾರ ಮುಗಿದೊಡನೆ ‘‘ನೀನು ಎಲ್ಲಾದರೂ ಹೋಗಿ ಸಾಯಿ’’ ಎನ್ನುತ್ತಾನೆ ತಂದೆ. ತಂದೆಯ ಮಾತಿಗೆ ನೊಂದು ಮಸಣದಲ್ಲೇ ಆತ್ಮಹತ್ಯೆಗೆ ಮುಂದಾಗುವ ಲಕ್ಕಿಗೆ ಅಲ್ಲಿ ದೆವ್ವಗಳಾಡುವ ಮಾತುಗಳು ಕೇಳಲು ಶುರುವಾಗುತ್ತದೆ. ದೆವ್ವಗಳ ಸ್ನೇಹದಿಂದ ಲಕ್ಕಿ ಜೀವನ ಹೊಸದಾಗಿ ಬದಲಾಗುತ್ತದೆ. ಈ ರಸವತ್ತಾದ ಬದಲಾವಣೆಯ ಕತೆಯೇ ‘ಜಿ.ಎಸ್.ಟಿ.’! ಇದರ ಪೂರ್ತಿ ವಾಕ್ಯ ಘೋಸ್ಟ್ಸ್ ಇನ್ ಟ್ರಬಲ್. ಹಾಗಾದರೆ ದೆವ್ವಗಳ ಸಮಸ್ಯೆ ಏನು ಎನ್ನುವುದನ್ನು ತೆರೆಯ ಮೇಲೆ ನೋಡುವುದೇ ಚಂದ.
ಸಿನೆಮಾ ಶುರುವಾಗುವುದೇ ಒಂದು ಚೇಸಿಂಗ್ ದೃಶ್ಯದ ಮೂಲಕ. ಇಡೀ ಚಿತ್ರಕಥೆಯಲ್ಲಿನ ದೃಶ್ಯಗಳು ಕೂಡ ಅಷ್ಟೇ. ಚೇಸ್ ಮಾಡಿದಂತೆ ವೇಗವಾಗಿ ಬಂದು ಹೋಗುತ್ತವೆ. ಪಾತ್ರಗಳನ್ನು, ಗ್ರಾಫಿಕ್ಸ್ ಅನ್ನು ಸಂಕಲನದ ಮೂಲಕ ಕುಳ್ಳಿರಿಸಿರುವ ರೀತಿಯಲ್ಲೂ ವೇಗವಿದೆ. ಚುರುಕು ಸಂಭಾಷಣೆಯೊಂದಿಗೆ ಸಾಗುವ ಕಥೆಯೂ ಹುರುಪು ನೀಡುತ್ತದೆ.
ಲಕ್ಕಿಯ ಆತ್ಮಹತ್ಯೆ ತಡೆಯುವ ದೆವ್ವಗಳಾಗಿ ಗಿರಿಜಾ ಲೋಕೇಶ್, ತಬಲಾನಾಣಿ, ನಿವೇದಿತಾ ಗೌಡ, ಗೊಬ್ಬರಗಾಲ ಮತ್ತು ಮಾಸ್ಟರ್ ಸುಕೃತ್ ನಟಿಸಿದ್ದಾರೆ. ಒಂದೊಂದು ದೆವ್ವಕ್ಕೂ ಒಂದೊಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿ ಇರುತ್ತದೆ. ಇವರಲ್ಲಿ ಯಾರೂ ಕೂಡ ಆತ್ಮಹತ್ಯೆ ಮಾಡಿದವರಲ್ಲ. ಪ್ರತಿಯೊಬ್ಬರು ಕೂಡ ಬದುಕಿನ ಬಗ್ಗೆ ಕನಸಿಟ್ಟುಕೊಂಡವರೇ. ಆದರೆ ಅನ್ಯಾಯದಿಂದ ಅಪಮೃತ್ಯುವಿಗೆ ಒಳಗಾಗಿರುತ್ತಾರೆ. ಆಸೆ ಉಳಿಸಿಕೊಂಡು ದೆವ್ವಗಳಾಗಿರುವ ಪ್ರತಿಯೊಬ್ಬರ ಗುರಿ ನೆರವೇರಲು ಬ್ಯಾಂಕ್ ಹಣ ದರೋಡೆ ಮಾಡಬೇಕು ಎನ್ನುವ ಯೋಜನೆ ಹಾಕುತ್ತಾರೆ.
ಆರಂಭದ ಚೇಸಿಂಗ್ ದೃಶ್ಯದಲ್ಲಿ ಅಪಘಾತದ ಸಾವಿಗೊಳಗಾದ ದೆವ್ವವೂ ಇಲ್ಲಿ ಜೊತೆಯಾಗುತ್ತದೆ.
ಮೊದಲಾರ್ಧದ ಫ್ಯಾಂಟಸಿ ಒಂದು ವಿಧದ ಹಾಸ್ಯ. ಆದರೆ ಮಧ್ಯಂತರದ ಬಳಿಕ ಬ್ಯಾಂಕ್ ರಾಬರಿಯಲ್ಲಿ ಎದುರಾಗುವ ಟ್ವಿಸ್ಟ್ ಮಾತ್ರ ಆತ್ಯಾಕರ್ಷಕ. ಅದರಲ್ಲೂ ರಾಬರಿ ಮಾಡಲು ದರೋಡೆಗೆ ಹಾಕಿದ ಬ್ಯಾಂಕ್‌ಗೆ ನುಗ್ಗುವ ಶೋಭರಾಜ್ ತಂಡ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ.
ಲಕ್ಕಿಯಾಗಿ ಸೃಜನ್ ಲೋಕೇಶ್ ಪಂಚಿಂಗ್ ಮಾತುಗಳ ಮೂಲಕ ತಮ್ಮ ಟಾಕಿಂಗ್ ಸ್ಟಾರ್ ಇಮೇಜ್ ಉಳಿಸಿಕೊಂಡಿದ್ದಾರೆ. ಆದರೆ ದೇಹಭಾಷೆಯಲ್ಲಿ ಮಾತ್ರ ಯಾವುದೇ ಸುಧಾರಣೆ ಕಾಣಿಸಿಲ್ಲ. ಚಿತ್ರದ ಮೂಲಕ ನಿರ್ದೇಶಕನಾಗಿ ಪದಾರ್ಪಣೆ ಮಾಡಿರುವ ಸೃಜನ್ ಈ ಹಿಂದೆಯೇ ಈ ವಿಭಾಗಕ್ಕೆ ಕಾಲಿಡಬೇಕಿತ್ತು ಅಂತ ಅನಿಸದೇ ಇರದು. ತಮ್ಮ ಮೊದಲ ಪ್ರಯತ್ನದಲ್ಲಿ ಮೂರು ತಲೆಮಾರನ್ನು ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಅಜ್ಜಿ ದೆವ್ವವಾಗಿ ಗಿರಿಜಾ ಲೋಕೇಶ್ ಮತ್ತು ಹುಡುಗ ದೆವ್ವವಾಗಿ ಸೃಜನ್ ಪುತ್ರ ಸುಕೃತ್ ಅಭಿನಯಿಸಿದ್ದಾರೆ. ಅಪಘಾತದಲ್ಲಿ ಸತ್ತ ದೆವ್ವವಾಗಿ ಕಾಣಿಸುವ ಅರವಿಂದ್ ರಾವ್ ಅವರಿಗೆ ಇದು ಹೊಸ ಮಾದರಿಯ ಪಾತ್ರವಾಗಿದೆ. ಸದಾ ಪೊಲೀಸ್ ಪಾತ್ರಗಳಿಗೆ ಮೀಸಲಾಗಿದ್ದ ಅರವಿಂದ್ ಅವರ ಇಲ್ಲಿನ ಪಾತ್ರ ದೆವ್ವಗಳ ಮಧ್ಯೆಯೂ ಕುತೂಹಲ ಸೃಷ್ಟಿಸುತ್ತದೆ.
ಸ್ವಂತ ಮಗನನ್ನೇ ದುರದೃಷ್ಟವಂತನೆಂದು ಆರೋಪಿಸುವ ತಂದೆಯಾಗಿ ಅಶೋಕ್ ಮತ್ತು ಮುದ್ದಾಗಿ ಬೆಳೆಸುವ ತಾಯಾಗಿ ವಿನಯಾ ಪ್ರಸಾದ್ ನಟಿಸಿದ್ದಾರೆ. ಈ ಕಥೆಯಲ್ಲಿ ಲಕ್ಕಿಗೆ ಒಂದು ಪ್ರೇಮಕಥೆಯೂ ಇದೆ. ಲಕ್ಕಿಯ ಪ್ರೇಯಸಿಯಾಗಿ ರಜನಿ ಭಾರದ್ವಾಜ್ ಅಭಿನಯಿಸಿದ್ದಾರೆ. ಸ್ಪೆಷಲ್ ಸಾಂಗ್ ಒಂದರಲ್ಲಿ ಸಂಹಿತಾ ವಿನ್ಯಾ ಮೋಹಕ ನೃತ್ಯ ಪ್ರದರ್ಶಿಸಿದ್ದಾರೆ.
ಲಕ್ಕಿಯ ಸ್ನೇಹಿತನಾಗಿ ಗಿರೀಶ್ ಶಿವಣ್ಣ ‘ಡ್ರಿಂಕ್ ಫ್ರಮ್ ಹೋಮ್’ ಮಾಡುವ ಕುಡುಕನಾಗಿ ನಗಿಸಿದ್ದಾರೆ. ಇವರಷ್ಟೇ ಅಲ್ಲದೆ ಯಮುನಾ ಶ್ರೀನಿಧಿ, ನಟನ ಪ್ರಶಾಂತ್, ಸುಂದರ್, ವೀಣಾ ಸುಂದರ್, ದಿವ್ಯಾ ವಸಂತ ಮೊದಲಾದ ಕಲಾವಿದರಿದ್ದಾರೆ. ಚಂದನ್ ಶೆಟ್ಟಿ ಸಂಗೀತದಲ್ಲಿನ ಹಾಡುಗಳು ಮನಸೆಳೆಯುತ್ತವೆ.
ಬ್ಯಾಂಕ್ ದರೋಡೆ ದೃಶ್ಯದಲ್ಲಿ ನಟ ಶೋಭರಾಜ್ ಮತ್ತು ಕಿರುತೆರೆ ನಟ ಶೋಭರಾಜ್ ಪಾವೂರು ಇಬ್ಬರ ಕಾಂಬಿನೇಶನ್ ಚೆನ್ನಾಗಿ ವರ್ಕೌಟ್ ಆಗಿದೆ. ರಾಜಶೇಖರ್ ಸಂಭಾಷಣೆಗಳು ನಗುವಿನ ವೈರಸ್ ಹರಡಿವೆ. ಆದರೆ ಹಾಸ್ಯದ ಹೆಸರಲ್ಲಿ ಉಗ್ಗುವಿಕೆ, ಕಾಲು ಕುಂಟುವಿಕೆ ಮೊದಲಾದವುಗಳ ಬಳಕೆಯ ಕಾಲಘಟ್ಟ ದಾಟಿರುವುದನ್ನು ಮೇಕರ್ಸ್ ಅರ್ಥಮಾಡಿಕೊಳ್ಳಬೇಕಿದೆ. ಈ ಸಿನೆಮಾ ಸೃಜನ್ ಗೆ ಎಷ್ಟು ಅದೃಷ್ಟ ತರುತ್ತದೋ ಗೊತ್ತಿಲ್ಲ. ಆದರೆ ನಿರ್ದೇಶಕನಾಗಿ ಮೊದಲ ಪ್ರಯತ್ನದಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೃಜನ್ ಲೋಕೇಶ್ ಗೆದ್ದಿರುವುದಂತೂ ನಿಜ.