ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಯಿಂದ ಬಿಡುಗಡೆ; ಮನೆಯಲ್ಲೇ ಚಿಕಿತ್ಸೆ ಮುಂದುವರಿಕೆ
ಮುಂಬೈ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (89) ಅವರನ್ನು ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಿಂದ ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಲಾಗಿದ್ದು, ಅವರು ಈಗ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆಲವು ವೈದ್ಯಕೀಯ ಪರೀಕ್ಷೆಗಳ ಸಲುವಾಗಿ ಕೆಲವು ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕುಟುಂಬದ ಪರವಾಗಿ ಪ್ರಕಟನೆ ಬಿಡುಗಡೆ ಮಾಡಿದ ಪುತ್ರ ಸನ್ನಿ ಡಿಯೋಲ್, “ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳು ಮತ್ತು ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಈ ಸಮಯದಲ್ಲಿ ಅವರ ಹಾಗೂ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ಅವರ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ತೋರಿಸುತ್ತಿರುವ ಪ್ರೀತಿ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು,” ಎಂದು ತಿಳಿಸಿದ್ದಾರೆ.
“ಧರ್ಮೇಂದ್ರ ಜೀ ಅವರನ್ನು ಬೆಳಿಗ್ಗೆ 7.30ರ ಸುಮಾರಿಗೆ ಬಿಡುಗಡೆ ಮಾಡಲಾಗಿದೆ. ಕುಟುಂಬದವರು ಮನೆಯಲ್ಲೇ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ,” ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪ್ರತೀತ್ ಸಮ್ದಾನಿ ಹೇಳಿದರು.
ಆಸ್ಪತ್ರೆಯಿಂದ ಸನ್ನಿ ಡಿಯೋಲ್ ಅವರ ಜುಹು ನಿವಾಸದತ್ತ ಆಂಬುಲೆನ್ಸ್ ತೆರಳುತ್ತಿರುವುದು ಕಂಡು ಬಂದಿದೆ.
ಮಂಗಳವಾರ ಕೆಲ ಮಾಧ್ಯಮಗಳು ಧರ್ಮೇಂದ್ರ ಅವರ ನಿಧನದ ಕುರಿತು ಸುಳ್ಳು ವರದಿಗಳನ್ನು ಪ್ರಸಾರ ಮಾಡಿದ್ದನ್ನು ಕುಟುಂಬವು ತೀವ್ರವಾಗಿ ಖಂಡಿಸಿದೆ. ಮಗಳು ಇಶಾ ಡಿಯೋಲ್ ಸಾಮಾಜಿಕ ಜಾಲತಾಣದಲ್ಲಿ, “ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನಮ್ಮ ಕುಟುಂಬದ ಗೌಪ್ಯತೆಯನ್ನು ಕಾಪಾಡಿ,” ಎಂದು ವಿನಂತಿಸಿದ್ದರು.
ಧರ್ಮೇಂದ್ರ ಅವರ ಪತ್ನಿ ಹಾಗೂ ಹಿರಿಯ ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರು ಕೂಡಾ ಮಾಧ್ಯಮಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು. “ಚಿಕಿತ್ಸೆಗೆ ಸ್ಪಂದಿಸುತ್ತಿರುವ ವ್ಯಕ್ತಿಯ ಕುರಿತು ಸುಳ್ಳು ಸುದ್ದಿಗಳನ್ನು ಹರಡುವುದು ಅತ್ಯಂತ ಬೇಜವಾಬ್ದಾರಿಯ ಕೆಲಸ. ದಯವಿಟ್ಟು ಕುಟುಂಬದ ಗೌಪ್ಯತೆಯನ್ನು ಗೌರವಿಸಿ,” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ಧರ್ಮೇಂದ್ರ ಅವರ ಆರೋಗ್ಯ ವಿಚಾರಿಸಲು ಶಾರುಖ್ ಖಾನ್, ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಆಸ್ಪತ್ರೆಗೆ ಭೇಟಿ ನೀಡಿದ್ದರು.