ಸ್ಕೂಬಾ ಡೈವಿಂಗ್ ವೇಳೆ ದುರಂತ | ಖ್ಯಾತ ಗಾಯಕ ಝುಬೀನ್ ಗರ್ಗ್ ಸಿಂಗಾಪುರದಲ್ಲಿ ನಿಧನ
ಝುಬೀನ್ ಗರ್ಗ್ (Photo: NDTV)
ಸಿಂಗಾಪುರ: ಪ್ರಸಿದ್ಧ ಗಾಯಕ ಹಾಗೂ ಸಂಗೀತ ನಿರ್ದೇಶಕ ಝುಬೀನ್ ಗರ್ಗ್ (52) ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ 20 ಮತ್ತು 21ರಂದು ನಡೆಯಲಿರುವ ಈಶಾನ್ಯ ಭಾರತ ಉತ್ಸವದಲ್ಲಿ ಪಾಲ್ಗೊಳ್ಳಲು ಅವರು ಸಿಂಗಾಪುರಕ್ಕೆ ಆಗಮಿಸಿದ್ದರು. ಮಂಗಳವಾರ ವಿಶ್ರಾಂತಿ ವೇಳೆ ಸ್ಕೂಬಾ ಡೈವಿಂಗ್‌ಗೆ ತೆರಳಿದಾಗ ಗಾರ್ಗ್ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ರಕ್ಷಣಾ ಸಿಬ್ಬಂದಿ ಅವರನ್ನು ದಡಕ್ಕೆ ತರಿಸಿ ಸಿಪಿಆರ್ ನೀಡಿದರು. ಬಳಿಕ ಅವರನ್ನು ಸಿಂಗಾಪುರ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾರತೀಯ ಸಮಯ ಮಧ್ಯಾಹ್ನ 2.30ಕ್ಕೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
“ಝುಬೀನ್ ಗರ್ಗ್ ಅವರ ನಿಧನ ನಮ್ಮೆಲ್ಲರಿಗೂ ಆಘಾತ ತಂದಿದೆ. ಸ್ಕೂಬಾ ಡೈವಿಂಗ್ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡ ತಕ್ಷಣವೇ ಎಲ್ಲಾ ಕ್ರಮ ಕೈಗೊಳ್ಳಲಾಯಿತು. ಆದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ಉತ್ಸವದ ಪ್ರತಿನಿಧಿ ಅನುಜ್ ಕುಮಾರ್ ಬೊರುವಾ ಪ್ರತಿಕ್ರಿಯೆ ನೀಡಿದರು.
ಸಂಗೀತ ಲೋಕದ ಶ್ರೇಷ್ಠ ಧ್ವನಿ:
ಅಸ್ಸಾಂ ಮೂಲದ ಝುಬೀನ್ ಗರ್ಗ್ ಅಸ್ಸಾಮಿ, ಬಂಗಾಳಿ ಹಾಗೂ ಹಿಂದಿ ಭಾಷೆಯ ಚಲನಚಿತ್ರಗಳಿಗೆ ಹಾಡಿದ್ದಾರೆ. ಬಾಲಿವುಡ್‌ನಲ್ಲಿ ಹಲವು ಜನಪ್ರಿಯ ಗೀತೆಗಳ ಮೂಲಕ ಅವರು ಖ್ಯಾತಿ ಪಡೆದಿದ್ದರು.
2022ರಲ್ಲಿ ದಿಬ್ರುಗಢದ ರೆಸಾರ್ಟ್ ನಲ್ಲಿ ಬಿದ್ದು ತಲೆಗೆ ಗಾಯಗೊಂಡಿದ್ದ ಗರ್ಗ್ ಅವರನ್ನು ಆಗ ಏರ್ ಆಂಬ್ಯುಲೆನ್ಸ್ ಮೂಲಕ ಗುವಾಹಟಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದರು.