ರವಿಚಂದ್ರನ್ ಮುಂದಾಳತ್ವದಲ್ಲಿ ‘ಐ ಆ್ಯಮ್ ಗಾಡ್’; ಸಂಗೀತ ಪ್ರಧಾನ ಎಐ ಸಿನಿಮಾ
35 ಹಾಡುಗಳಿರುವ ‘ಐ ಆ್ಯಮ್ ಗಾಡ್’ ಸಂಗೀತ ಪ್ರಧಾನ ಸಿನಿಮಾ ಆಗಿರುವುದರಲ್ಲಿ ಸಂಶಯವಿಲ್ಲ.
ಕ್ರೇಜಿ ಸ್ಟಾರ್ ರವಿಚಂದ್ರನ್ | Photo Credit : @sharadasrinidhi
ಕ್ರೇಜಿ ಸ್ಟಾರ್ ರವಿಚಂದ್ರನ್ ಎಐ ಚಾಲಿತ ಪ್ರಾಯೋಗಿಕ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ‘ಐ ಆ್ಯಮ್ ಗಾಡ್- ದಿ ಕ್ರೇಜಿ’ ಎನ್ನುವ ಸಿನಿಮಾವನ್ನು ಸದ್ದಿಲ್ಲದೆ ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮಕ್ಕೆ ಬಂದಾಗ ಈ ಬಗ್ಗೆ ಅವರು ವಿವರ ನೀಡಿದ್ದಾರೆ. ಶಿವರಾತ್ರಿಯಂದು ಸಿನಿಮಾ ಪ್ರಚಾರ ಆರಂಭವಾಗುವ ಸಾಧ್ಯತೆ ಇದೆ.
ಸಂಗೀತ ಪ್ರಧಾನ ಸಿನಿಮಾ
ರವಿಚಂದ್ರನ್ ಸಿನಿಮಾಗಳಲ್ಲಿ ಹಾಡುಗಳೇ ಮುಖ್ಯಪಾತ್ರವಹಿಸುತ್ತವೆ ಎಂದು ಸಿನಿಪ್ರೇಕ್ಷಕರಿಗೆ ಹೊಸ ವಿಷಯವೇನಲ್ಲ. ಈವರೆಗೆ ಅವರು ಮಾಡಿದ ಸಿನಿಮಾಗಳಲ್ಲಿ ಸಂಗೀತವೇ ಕತೆಗೆ ಜೀವ ತುಂಬಿದೆ. ‘ಐ ಆ್ಯಮ್ ಗಾಡ್’ ಸಿನಿಮಾದಲ್ಲೂ 35 ಹಾಡುಗಳಿವೆ. ಹೀಗಾಗಿ ‘ಐ ಆ್ಯಮ್ ಗಾಡ್’ ಸಂಗೀತ ಪ್ರಧಾನ ಸಿನಿಮಾ ಆಗಿರುವುದರಲ್ಲಿ ಸಂಶಯವಿಲ್ಲ.
ಏಕವ್ಯಕ್ತಿ ಪ್ರದರ್ಶನ
ರವಿಚಂದ್ರನ್ ಹೊಸ ಪ್ರಯೋಗಗಳಿಗೆ ಖ್ಯಾತಿ ಗಳಿಸಿದವರು. ಈ ಸಿನಿಮಾವು ಅವರ ಏಕವ್ಯಕ್ತಿ ಪ್ರದರ್ಶನವಾಗಿದೆ. ರವಿಚಂದ್ರನ್ ಸ್ವತಃ ಬರವಣಿಗೆ ಮತ್ತು ನಿರ್ದೇಶನದಿಂದ ತೊಡಗಿ ಸಂಗೀತ ಸಂಯೋಜನೆಯಲ್ಲೂ ಸೇರಿದಂತೆ ಪ್ರತಿ ಸೃಜನಶೀಲ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಛಾಯಾಗ್ರಹಣ ಹೊರತುಪಡಿಸಿ ಬಹುತೇಕ ಎಲ್ಲಾ ವಿಭಾಗಗಳನ್ನು ಸ್ವತಃ ನಿರ್ವಹಿಸಿದ್ದಾರೆ.
ಪಾತ್ರ ನಿರ್ವಹಿಸಿದ ಪುತ್ರ ಮನೋರಂಜನ್
ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಹಳ ಹೆಚ್ಚು ಬಳಕೆ ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಸಾಧನಗಳನ್ನು ಬಳಸಿಕೊಂಡು ವ್ಯಾಪಕವಾಗಿ ರೂಪುಗೊಂಡ ಅಪರೂಪದ ಕನ್ನಡ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾದ ‘ಐ ಆ್ಯಮ್ ಗಾಡ್- ದಿ ಕ್ರೇಜಿ’ ಚಿತ್ರವನ್ನು ರವಿಚಂದ್ರನ್ ಅವರ ತಾಂತ್ರಿಕ ಪ್ರಯೋಗ ಮತ್ತು ವೈಯಕ್ತಿಕ ಯೋಜನೆಯಾಗಿ ನೋಡಲಾಗುತ್ತಿದೆ. ಸಾರ್ವಜನಿಕವಾಗಿ ತಮ್ಮ ಚಿತ್ರದ ಬಗ್ಗೆ ವಿವರಿಸುವ ಬದಲಾಗಿ ತಮ್ಮ ಸಿನಿಮಾವೇ ಮಾತನಾಡಬೇಕು ಎಂದು ಅವರು ಬಯಸಿದ್ದಾರೆ. ಹೀಗಾಗಿ, ಸಿನಿಮಾ ಪೂರ್ಣಗೊಳ್ಳಲು ಆದ್ಯತೆ ನೀಡಿರುವಾಗಿ ರವಿಚಂದ್ರನ್ ಹೇಳಿದ್ದಾರೆ.
ಮೇ ತಿಂಗಳಲ್ಲಿ ಬಿಡುಗಡೆ
ಮೇ ತಿಂಗಳಲ್ಲಿ ರವಿಚಂದ್ರನ್ ಹುಟ್ಟುಹಬ್ಬ ಬರುತ್ತದೆ. ಹೀಗಾಗಿ ಮೇ 30ರಂದು ಸಿನಿಮಾ ಬಿಡುಗಡೆ ಮಾಡುವ ಗುರಿಯನ್ನು ಅವರು ಇಟ್ಟುಕೊಂಡಿದ್ದಾರೆ. ಪ್ರಚಾರಗಳು ಶಿವರಾತ್ರಿಯಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಜನರಲ್ಲಿ ಕುತೂಹಲ ಮೂಡಲು ಕಾರಣವಾಗಿದೆ. ರವಿಚಂದ್ರನ್ ಪುತ್ರ ಮನೋರಂಜನ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿನಿಮಾ ನಿರ್ಮಿಸಲು ರವಿಚಂದ್ರನ್ ಅವರಿಗೆ ಎರಡೂವರೆ ವರ್ಷಗಳು ಹಿಡಿದಿದೆ. ಸುಮಾರು 400 ದಿನಗಳ ಚಿತ್ರೀಕರಣ ಪೂರ್ಣಗೊಳಿಸಿದೆ.