ಸಾಯಿ ಪಲ್ಲವಿ- ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಟೀಸರ್ ಬಿಡುಗಡೆ
Photo Credit : bollywoodhungama.com
ದಕ್ಷಿಣದ ಖ್ಯಾತನಟಿ ಸಾಯಿ ಪಲ್ಲವಿ ಅವರ ಚೊಚ್ಚಲ ಹಿಂದಿ ಸಿನಿಮಾ ‘ಏಕ್ ದಿನ್’ ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಜುನೈದ್ ಖಾನ್ ನಾಯಕನ ನಟರಾಗಿ ಅಭಿನಯಿಸಿದ್ದಾರೆ.
ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ಹಿರಿಯ ನಟ ಅಮೀರ್ ಖಾನ್ ಮಗ ಜುನೈದ್ ಖಾನ್ ನಟಿಸಿರುವ ‘ಏಕ್ ದಿನ್’ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಈ ಬಗ್ಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. “ಕೆಲವೊಮ್ಮೆ ಕತೆಗಳಿಗೆ ಸಮಯ ಬೇಕಿಲ್ಲ. ‘ಏಕ್ ದಿನ್’ ಅನ್ನು ಚಿತ್ರಮಂದಿರಗಳಲ್ಲಿ ಮಾತ್ರ ನೋಡಿ” ಎನ್ನುವ ಸಂದೇಶದ ಜೊತೆಗೆ ಜನವರಿ 16ರಂದು ಶುಕ್ರವಾರ ಪ್ರಚಾರದ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಸಿನಿಮಾ 2026 ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
‘ಏಕ್ ದಿನ್’ ಒಂದು ಪ್ರೇಮ ಕತೆಯಿರುವ ಸಿನಿಮಾವಾಗಿದೆ. ಜನವರಿ 15ರಂದು ಚಿತ್ರತಂಡ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿತ್ತು. ಇದೀಗ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಮೊತ್ತ ಮೊದಲ ಬಾರಿಗೆ ಸಾಯಿ ಪಲ್ಲವಿ ಮತ್ತು ಜುನೈದ್ ಖಾನ್ ಜೊತೆಗೂಡಿ ಅಭಿನಯಿಸಿದ್ದಾರೆ. ಸಾಯಿ ಪಲ್ಲವಿ ತಮ್ಮ ಸಹಜವಾದ ಮತ್ತು ಭಾವನಾತ್ಮಕ ಪಾತ್ರಗಳಿಗೆ ಪ್ರಸಿದ್ಧಿಪಡೆದಿದ್ದಾರೆ. ಜುನೈದ್ ಖಾನ್ ‘ಮಹಾರಾಜ’. ‘ಲವ್ಯಪ’ ಸಿನಿಮಾಗಳ ಮೂಲಕ ನಿಧಾನವಾಗಿ ಸಿನಿಮಾಗಳಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದಾರೆ.
ಏಕ್ ದಿನ್’ ಹಲವು ಕಾರಣಗಳಿಂದ ಜನರ ಗಮನ ಸೆಳೆದಿದೆ. ಮೊದಲನೆಯದಾಗಿ ಇದು ಸಾಯಿಪಲ್ಲವಿ ಅವರ ಚೊಚ್ಚಲ ಹಿಂದಿ ಸಿನಿಮಾ. ಅಲ್ಲದೆ, ಸಾಯಿಪಲ್ಲವಿ ಮತ್ತು ಜುನೈದ್ ಖಾನ್ ಜೋಡಿ ಟೀಸರ್ನಲ್ಲಿ ಚೆನ್ನಾಗಿ ಕಾಣಿಸುತ್ತಿದೆ. ಸಾಯಿ ಪಲ್ಲವಿ ದಕ್ಷಿಣ ಭಾರತೀಯ ಹಿಂದಿ ಆಕ್ಸೆಂಟ್ನಲ್ಲಿ ಮಾತನಾಡಿದ್ದಾರೆ. ಇದು ಭಾವನಾತ್ಮಕ ಪ್ರೇಮ ಕತೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಈ ಸಿನಿಮಾ 2016ರ ಥಾಯ್ ಸಿನಿಮಾ ‘ಒನ್ ಡೇ’ ರೀತಿಯೇ ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ರಿತೇಶ್ ದೇಶ್ಮುಖ್ ಅವರ ‘ರಾಜಾ ಶಿವಾಜಿ’ ಸಿನಿಮಾ ಜೊತೆಗೆ ಮೇ 1ರಂದು ‘ಏಕ್ ದಿನ್’ ಚಿತ್ರಮಂದಿರಗಳಿಗೆ ಬರಲಿದೆ.