×
Ad

ʼಟಾಕ್ಸಿಕ್ʼ, ʼಪರಾಶಕ್ತಿʼ ಮತ್ತು ʼಜನನಾಯಗನ್ʼ: ಬಿರುಗಾಳಿಯನ್ನು ಎದುರಿಸುತ್ತಿರುವ ದಕ್ಷಿಣದ ಚಿತ್ರಗಳು!

Update: 2026-01-15 14:33 IST

Photo Credit : imdb.com

ಕಾನೂನು ಸವಾಲುಗಳು, ರಾಜಕೀಯ ವಿರೋಧ ಮತ್ತು ಅನೈತಿಕ ಪೊಲೀಸ್ ಗಿರಿಯನ್ನು ಎದುರಿಸುತ್ತಿರುವ ದಕ್ಷಿಣದ ಸಿನಿಮಾಗಳು ಬಿರುಗಾಳಿಗೆ ಧೂಳೀಪಟವಾಗುತ್ತವೆಯೇ ಅಥವಾ ತಡೆದು ನಿಲ್ಲುತ್ತವೆಯೇ ಎಂದು ಕಾದು ನೋಡಬೇಕಿದೆ.

ಬ್ಲಾಕ್‌ಬಸ್ಟರ್ ರಿಲೀಸ್‌ಗಳೆಂದು ಕಾಯಲಾಗಿದ್ದ ಮೂರು ದಕ್ಷಿಣದ ಸಿನಿಮಾಗಳು ಇದೀಗ ವಿವಾದದ ಕೇಂದ್ರವಾಗಿವೆ. ಅವುಗಳಲ್ಲಿ ಎರಡು ಇನ್ನೂ ಚಿತ್ರಮಂದಿರಕ್ಕೆ ಬರಬೇಕಿದ್ದರೆ, ಒಂದು ಈಗಾಗಲೇ ಬಿಡುಗಡೆಯಾಗಿದೆ. ವಿಜಯ್‌ನ ‘ಜನನಾಯಗನ್‌’ ಮತ್ತು ಯಶ್‌ ನಾಯಕತ್ವದ ‘ಟಾಕ್ಸಿಕ್’ ಇನ್ನೂ ಬಿಡುಗಡೆಯಾಗಬೇಕಿದೆ. ಶಿವಕಾರ್ತಿಕೇಯನ್‌ರ ‘ಪರಾಶಕ್ತಿ’ ಬಿಡುಗಡೆಯಾದ ನಂತರ ವಿವಾದಕ್ಕೆ ಸಿಲುಕಿದೆ.

ಸೆನ್ಸಾರ್ ಮಂಡಳಿಯ ಹೋರಾಟದಿಂದ ಆರಂಭಿಸಿ ರಾಜಕೀಯ ಆರೋಪ ಪ್ರತ್ಯಾರೋಪಗಳವರೆಗೆ ಮತ್ತು ಅಶ್ಲೀಲತೆಯ ದೂರು ಸಲ್ಲಿಕೆವರೆಗೆ ಬಿರುಗಾಳಿಯೇ ಬೀಸುತ್ತಿದೆ. ದಕ್ಷಿಣದ ಸಿನಿಮಾಗಳು ರಾಜಕೀಯ ಮತ್ತು ಸಾರ್ವಜನಿಕ ನೈತಿಕತೆಯ ನಡುವೆ ಸಿಲುಕಿ ಒದ್ದಾಡುತ್ತಿವೆ ಎನ್ನಬಹುದು.

► ಜನನಾಯಗನ್: ಸೆನ್ಸಾರ್ ಮಂಡಳಿ ಜೊತೆಗೆ ಹೋರಾಟ

ದಳಪತಿ ವಿಜಯ್ ಅವರ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ನಟ ವಿಜಯ್ ತಮ್ಮ ಪಕ್ಷ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮೂಲಕ ಪೂರ್ಣ ಪ್ರಮಾಣದಲ್ಲಿ ರಾಜಕೀಯ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಕೊನೆಯ ಸಿನಿಮಾವೆನ್ನುವ ಖ್ಯಾತಿ ಗಳಿಸಿತ್ತು. ಆದರೆ ಸಿನಿಮಾ ಕಾನೂನು ಹೋರಾಟದ ನಡುವೆ ಇಂದಿಗೂ ಬಿಡುಗಡೆ ಭಾಗ್ಯ ಪಡೆದಿಲ್ಲ.

ಭಾರತದಲ್ಲಿ ಸಿನಿಮಾಗೆ ಪ್ರಮಾಣಪತ್ರ ನೀಡುವ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ಸಿನಿಮಾದಲ್ಲಿರುವ ವಿಷಯಗಳಿಗೆ ಸಂಬಂಧಿಸಿ ಕಳವಳ ವ್ಯಕ್ತಪಡಿಸಿತ್ತು. ಹೀಗಾಗಿ ಡಿಸೆಂಬರ್ 6ರಂದು ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶಿಸಿತ್ತು. ಸಿನಿಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂಬ ಸೆನ್ಸಾರ್ ಮಂಡಳಿಯ ಸದಸ್ಯರ ಆಂತರಿಕ ದೂರಿನ ಹಿನ್ನೆಲೆಯಲ್ಲಿ ಸಿನಿಮಾಗೆ ಪ್ರಮಾಣಪತ್ರ ನೀಡಿರಲಿಲ್ಲ ಎಂದು ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ತಿಳಿದುಬಂದಿತ್ತು. ನ್ಯಾಯಮೂರ್ತಿ ಪಿಟಿ ಆಶಾ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಆದೇಶಿಸಿದರು.

ಸಿಬಿಎಫ್‌ಸಿ ಸುಪ್ರೀಂಕೋರ್ಟ್‌ಗೆ ತುರ್ತು ಮೇಲ್ಮನವಿ ಸಲ್ಲಿಸಿ ಜನವರಿ 21ರವರೆಗೆ ಸಿನಿಮಾ ಬಿಡುಗಡೆಯನ್ನು ತಡೆಹಿಡಿಯಿತು. ಜನವರಿ 21ರಂದು ಸಿನಿಮಾದ ಮುಂದಿನ ವಿಚಾರಣೆಯಿದೆ. ಆದರೆ, ಜನವರಿ 15 ಅಥವಾ ನಂತರ ಪ್ರಕರಣ ವಿಚಾರಣೆಯಾಗುವ ಸಾಧ್ಯತೆಯಿದೆ.

ಜನನಾಯಗನ್‌ ನಿರ್ಮಾಪಕರು ಸಮಯದ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಆಯೋಗ ನೀತಿ ಸಂಹಿತೆ ಘೋಷಿಸಿದಲ್ಲಿ ಸಿನಿಮಾ 2026ರ ಅಂತ್ಯದವರೆಗೆ ಬಿಡುಗಡೆಯಾಗಲು ಸಾಧ್ಯವೇ ಇಲ್ಲ.

► ಪರಾಶಕ್ತಿ: ರಾಜಕೀಯ ಸಂದೇಶ ಮತ್ತು ಸಂವೇದನೆ

ಸುಧಾ ಕೊಂಗಾರ ನಿರ್ದೇಶಿಸಿರುವ ಶಿವಕಾರ್ತಿಕೇಯನ್ ಅವರ ‘ಪರಾಶಕ್ತಿ’ ಸಿನಿಮಾದಲ್ಲಿ 1965ರಲ್ಲಿ ತಮಿಳುನಾಡಿನಲ್ಲಿ ನಡೆದಿದ್ದ ಹಿಂದಿ ವಿರೋಧಿ ಪ್ರತಿಭಟನೆಗಳನ್ನು ತೋರಿಸಲಾಗಿದೆ. ಈ ವಿಷಯ ತಮಿಳುನಾಡಿನ ರಾಜಕೀಯ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿದೆ.

ಸಿನಿಮಾವು 1965ರಲ್ಲಿ ತಮಿಳುನಾಡಿನಲ್ಲಿ ನಡೆದಿದ್ದ ಹಿಂದಿ ವಿರೋಧಿ ಪ್ರತಿಭಟನೆಗಳನ್ನು ಆಧರಿಸಿದೆ. “ತಮಿಳು ಸಿನಿಮಾ ‘ಪರಾಶಕ್ತಿ’ಯಲ್ಲಿ ಐತಿಹಾಸಿಕ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಕೆ ಕಾಮರಾಜ್ ಸೇರಿದಂತೆ ಕಾಂಗ್ರೆಸ್‌ ನಾಯಕರ ಕುರಿತು ಮಾನಹಾನಿಕರ ಚಿತ್ರಣ ನೀಡಲಾಗಿದೆ. ಕಟ್ಟುಕಥೆಯನ್ನು ಬಿತ್ತರಿಸಲಾಗಿದೆ. ಅಂತಹ ದೃಶ್ಯಗಳನ್ನು ತೆಗೆದುಹಾಕಬೇಕು. ಚಲನಚಿತ್ರ ನಿರ್ಮಾಪಕರು ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ತಮಿಳುನಾಡು ಯುವ ಕಾಂಗ್ರೆಸ್‌ ಆರೋಪಿಸಿದೆ. ಸಿನಿಮಾವನ್ನು ನಿಷೇಧಿಸುವಂತೆ ತಮಿಳು ಸರ್ಕಾರವನ್ನು ಆಗ್ರಹಿಸಿದೆ. ಒಂದು ವೇಳೆ, ಚಿತ್ರತಂಡ ತಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಪಕ್ಷವು ಎಚ್ಚರಿಸಿದೆ.

ಈ ವಿವಾದವು ತಮಿಳುನಾಡಿನಲ್ಲಿ ಐತಿಹಾಸಿಕ ರಾಜಕೀಯ ಸಿನಿಮಾಗಳು ಎಂತಹ ತೂಗುಗತ್ತಿಯ ಮೇಲೆ ನಡೆಯುತ್ತಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಭಾಸ್ಕರ್ ಹೇಳುವ ಪ್ರಕಾರ 1965ರಲ್ಲಿ ಫೆಬ್ರವರಿ 12ರಂದು ಇಂದಿರಾ ಗಾಂಧಿ ಕೊಯಮತ್ತೂರಿಗೆ ಭೇಟಿಯೇ ನೀಡಿರಲಿಲ್ಲ. ಆದರೆ ಸಿನಿಮಾದಲ್ಲಿ ಇಂದಿರಾ ಗಾಂಧಿ ಎದುರಲ್ಲಿಯೇ ರೈಲನ್ನು ಹೊತ್ತಿ ಉರಿಸುವ ದೃಶ್ಯಗಳಿವೆ. “ಸಿನಿಮಾದಲ್ಲಿ ಇಂದಿರಾ ಗಾಂಧಿ ಎದುರೇ ರೈಲಿಗೆ ಕೊಳ್ಳಿ ಇಡಲಾಗುತ್ತದೆ ಮತ್ತು ಇಂದಿರಾ ಗಾಂಧಿ ಹಿಂದಿ ಹೇರಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ತೋರಿಸಲಾಗಿದೆ. ಇಂತಹ ಘಟನೆಗಳು ಇತಿಹಾಸದಲ್ಲಿ ನಡೆದೇ ಇಲ್ಲ” ಎಂದು ಭಾಸ್ಕರ್ ಹೇಳಿದ್ದಾರೆ.

ಅಲ್ಲದೆ, ಕಾಂಗ್ರೆಸ್‌ ಪೊಲ್ಲಾಚಿಯಲ್ಲಿ 200 ತಮಿಳಿಗರನ್ನು ಗುಂಡಿಕ್ಕಿ ಕೊಲ್ಲುವುದನ್ನು ತೋರಿಸಲಾಗಿದೆ. ಅಂತಹ ಘಟನೆಗಳೇ ನಡೆದಿಲ್ಲ. ಹೀಗಾಗಿ ಸಿನಿಮಾದಲ್ಲಿ ಉದ್ದೇಶಪೂರ್ವಕವಾಗಿ ಇತಿಹಾಸವನ್ನು ತಿರುಚಲಾಗಿದೆ ಮತ್ತು ಅದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಂತಹ ಸನ್ನಿವೇಶಗಳನ್ನು ತೆಗೆದು ಹಾಕಿ ಪರಾಶಕ್ತಿ ತಂಡ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

► ʼಟಾಕ್ಸಿಕ್ʼ: ಅಶ್ಲೀಲತೆಯ ದೂರುಗಳು

ಯಶ್ ಅವರ ʼಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್ʼ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಜನವರಿ 8ರಂದು ಯಶ್ ಜನ್ಮದಿನದಂದು ಬಿಡುಗಡೆಯಾದ ತನ್ನ ಮೊದಲ ಟೀಸರ್‌ನಿಂದಲೇ ಸಿನಿಮಾ ವಿವಾದ ಸೃಷ್ಟಿಸಿದೆ. ಆಮ್ ಆದ್ಮಿ ಪಕ್ಷದ ಮಹಿಳಾ ಶಾಖೆ ಸಿನಿಮಾದ ವಿರುದ್ಧ ಕರ್ನಾಟಕದ ರಾಜ್ಯ ಮಹಿಳಾ ಆಯೋಗಕ್ಕೆ (ಕೆಎಸ್‌ಸಿಡಬ್ಲ್ಯು) ದೂರು ನೀಡಿದೆ. ಸಿನಿಮಾದಲ್ಲಿ “ಅಶ್ಲೀಲ ಮತ್ತು ಪ್ರೌಢ ದೃಶ್ಯಗಳು” ಇದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಬೇಕು ಎಂದು ಶಾಖೆ ಒತ್ತಾಯಿಸಿದೆ.

2 ನಿಮಿಷ 31 ಸೆಕೆಂಡುಗಳಿರುವ ವಿಡಿಯೋ ಗೋವಾದ ಸ್ಮಶಾನದಲ್ಲಿ ನಡೆಯುವ ಒಂದು ಸನ್ನಿವೇಶವನ್ನು ತೋರಿಸುತ್ತದೆ. “ಈ ಟೀಸರ್ನಲ್ಲಿರುವ ಅಶ್ಲೀಲ ಹಾಗೂ ಪ್ರೌಢ ದೃಶ್ಯಗಳು ಮಹಿಳೆಯರು ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೇ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು, ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ತೀವ್ರ ಅಪಮಾನವಾಗಿದೆ” ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ರಾಜ್ಯ ಮಹಿಳಾ ಆಯೋಗದ ಅಧಿಕಾರಿಗಳು ಕೇಂದ್ರ ಸೆನ್ಸಾರ್ ಮಂಡಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಿದ ಬೆನ್ನಲ್ಲೇ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಸಿಬಿಎಫ್ಸಿಗೆ ದೂರು ನೀಡಿದ್ದಾರೆ. “ಟಾಕ್ಸಿಕ್ ಟೀಸರ್‌ನಲ್ಲಿ ಅಶ್ಲೀಲ ದೃಶ್ಯಗಳಿವೆ. ಅವು ಅಪ್ರಾಪ್ತ ವಯಸ್ಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ‘ಟಾಕ್ಸಿಕ್’ ಸಿನಿಮಾಗೆ ಪ್ರಮಾಣ ಪತ್ರ ನೀಡಬಾರದು” ಎಂದು ದಿನೇಶ್ ಕಲ್ಲಹಳ್ಳಿ ಅವರು ಸಿಬಿಎಫ್ಸಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.

ಸಿಬಿಎಫ್ಸಿ ಅಧ್ಯಕ್ಷೆ ಪ್ರಸೂನ್ ಜೋಶಿ ಅವರಿಗೆ ಸಲ್ಲಿಸಲಾದ ದೂರಿನ ದಾಖಲೆಯ ಪ್ರಕಾರ, ಟಾಕ್ಸಿಕ್ ಟೀಸರ್ 'ಅತ್ಯಂತ ಹೆಚ್ಚು ಅಶ್ಲೀಲವಾಗಿದ್ದು, ಲೈಂಗಿಕವಾಗಿ ಪ್ರೌಢ ಮತ್ತು ಅಸಭ್ಯ ಸ್ವಭಾವದ ದೃಶ್ಯಗಳನ್ನು ಹೊಂದಿದೆ ಎಂದು ಕಲ್ಲಹಳ್ಳಿ ಹೇಳಿದ್ದಾರೆ. ಅವರ ದೂರಿನನ್ವಯ ಅಂತಹ ವಿಷಯವನ್ನು ಸಂವಿಧಾನದ 19(1)(a) ವಿಧಿಯ ಅಡಿಯಲ್ಲಿ ರಕ್ಷಿಸಲಾಗಿಲ್ಲ ಮತ್ತು 19(2) ವಿಧಿಯ ಅಡಿಯಲ್ಲಿ ಅನುಮತಿಸಲಾದ ಮಿತಿಗಳಿಂದ ಹೊರಗಿದೆ.

ದೂರಿನಲ್ಲಿ 1952ರ ಸಿನಿಮಾಟೊಗ್ರಾಫ್ ಕಾಯ್ದೆ, ಸಿಬಿಎಫ್‌ಸಿ ಮಾರ್ಗಸೂಚಿಗಳು ಮತ್ತು 2023ರ ಭಾರತೀಯ ನ್ಯಾಯ ಸಂಹಿತಾ ನಿಬಂಧನೆಗಳನ್ನು ಉಲ್ಲೇಖಿಸಲಾಗಿದೆ. ಟ್ರೇಲರ್‌ಗಳು ಮತ್ತು ಪ್ರಚಾರ ಸಾಮಗ್ರಿಗಳು ಕೂಡ ಕಟ್ಟುನಿಟ್ಟಾದ ಪ್ರಮಾಣೀಕರಣ ಮಾನದಂಡಗಳಿಗೆ ಒಳಪಟ್ಟಿರುತ್ತವೆ. ಹೀಗಾಗಿ ಟ್ರೇಲರ್ ಅನ್ನು ಪರಿಶೀಲಿಸಲು, ಅದರ ಪ್ರಸರಣ/ ವ್ಯಾಪ್ತಿಯನ್ನು ನಿರ್ಬಂಧಿಸಲು ಮತ್ತು ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲು ದೂರುದಾರರು ಸಿಬಿಎಫ್‌ಸಿಯನ್ನು ಒತ್ತಾಯಿಸಿದ್ದಾರೆ. ತ್ವರಿತ ಕ್ರಮ ಕೈಗೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ.

ಟೀಕಾಕಾರರು ‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್‌ದಾಸ್ ವಿರುದ್ಧವೂ ಬೊಟ್ಟು ಮಾಡಿದ್ದಾರೆ. ಸ್ತ್ರೀವಾದಿ ಚಿಂತನೆಗಳುಳ್ಳ ಗೀತು ಮೋಹನ್‌ದಾಸ್ ಹೇಗೆ ಮಹಿಳೆಯರನ್ನು ಅಶ್ಲೀಲವಾಗಿ ತೋರಿಸುವ ಟೀಸರ್ ಬಿಡುಗಡೆಗೆ ಒಪ್ಪಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ ಗೀತು ಮೋಹನ್‌ದಾಸ್ ತಮ್ಮ ಸೃಷ್ಟಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಟಾಕ್ಸಿಕ್ ವಿವಾದವು ಮುಖ್ಯವಾಹಿನಿ ಭಾರತೀಯ ಸಿನಿಮಾದಲ್ಲಿ ಎಷ್ಟರ ಮಟ್ಟಿಗೆ ವಿಷಯಗಳನ್ನು ಒಪ್ಪಿಕೊಳ್ಳಲಾಗುತ್ತದೆ ಎನ್ನುವ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಸ್ವತಃ ವಯಸ್ಕರಿಗೆ ಮಾತ್ರ ಇರುವ ಕಾಲ್ಪನಿಕ ಚಿತ್ರವೆಂದು ಹೇಳಿಕೊಂಡರೂ ಎಲ್ಲ ವಯಸ್ಕರಿಗೂ ಲಭ್ಯವಿರುವ ಸಾರ್ವಜನಿಕ ವೇದಿಕೆಗಳಲ್ಲಿ ಅಶ್ಲೀಲತೆ ಹರಡುವುದು ಸರಿಯಲ್ಲ ಎಂದು ವಾದಿಸಲಾಗಿದೆ.

► ದಕ್ಷಿಣದ ಸಿನಿಮಾಗಳು ಮತ್ತು ರಾಜಕೀಯ

ಈ ಮೂರು ವಿವಾದಗಳು ಜೊತೆ ಜೊತೆಗೆ ಬಂದಿರುವುದನ್ನು ಕಂಡಾಗ ಸರ್ಕಾರ, ಸಂಘಟನೆಗಳು ಮತ್ತು ರಾಜಕೀಯ ಪಡೆಗಳ ಜೊತೆಗಿನ ದಕ್ಷಿಣದ ಸಿನಿಮಾಗಳ ಸಂಘರ್ಷದ ಅಧ್ಯಾಯಗಳನ್ನು ವಿವರಿಸುತ್ತದೆ.

ಹಾಗೆ ನೋಡಿದರೆ ದಕ್ಷಿಣದಲ್ಲಿ ಸಿನಿಮಾ ಮತ್ತು ರಾಜಕೀಯ ಜೊತೆಗೇ ಹೆಜ್ಜೆ ಹಾಕಿವೆ. ಕಾನೂನು ಸವಾಲುಗಳು, ರಾಜಕೀಯ ವಿರೋಧ ಮತ್ತು ಅನೈತಿಕ ಪೊಲೀಸ್ಗಿರಿಯನ್ನು ಸಿನಿಮಾಗಳು ಎದುರಿಸುತ್ತಿರುವ ಸಂದರ್ಭದಲ್ಲಿ ದಕ್ಷಿಣದ ಸಿನಿಮಾಗಳಿಗೆ ಅವಕಾಶ ಕಿರಿದಾಗುತ್ತಿರುವುದನ್ನು ಸಾಕಾರಗೊಳಿಸಿದೆ. ಈ ಸಿನಿಮಾಗಳು ಬಿರುಗಾಳಿಗೆ ಧೂಳೀಪಟವಾಗುತ್ತವೆಯೇ ಅಥವಾ ತಡೆದು ನಿಲ್ಲುತ್ತವೆಯೇ ಎಂದು ಕಾದು ನೋಡಬೇಕಿದೆ.

ಕೃಪೆ: ಇಂಡಿಯಾ ಟುಡೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News