×
Ad

ಬಾಲಿವುಡ್ ಸಿನಿಮಾದಲ್ಲಿ ಶಾರುಖ್ ಜೊತೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ ಹಾಲಿವುಡ್ ನಟ ವಿಲ್ ಸ್ಮಿತ್

Update: 2026-01-12 21:00 IST

Photo Credit : NDTV 

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಲಿ ಎಂಬ ಆಶಯವಿದೆ ಎಂದು ಹಾಲಿವುಡ್ ನಟ ವಿಲ್ ಸ್ಮಿತ್ ಹೇಳಿದ್ದಾರೆ.

ಹಾಲಿವುಡ್ ನಟ ವಿಲ್ ಸ್ಮಿತ್ ಮತ್ತೊಮ್ಮೆ ಬಾಲಿವುಡ್‌ ನಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ತಾವು ನಟಿಸಿರುವ ಮುಂಬರುವ ಸೀರೀಸ್ ‘ಪೋಲ್ ಟು ಪೋಲ್’ನ ಮಧ್ಯಪ್ರಾಚ್ಯದ ಪ್ರೀಮಿಯರ್ ಸಂದರ್ಭದಲ್ಲಿಯೇ ಅವರು ಈ ಆಶಯವನ್ನು ಬಹಿರಂಗಪಡಿಸಿದ್ದಾರೆ.

‘ಪೋಲ್ ಟು ಪೋಲ್’ನ ಮಧ್ಯಪ್ರಾಚ್ಯದ ಪ್ರೀಮಿಯರ್‌ಗೆ ದುಬೈಗೆ ಭೇಟಿ ನೀಡಿದ್ದ ವೇಳೆ, ನಟ ಹಿಂದಿ ಸಿನಿಮಾದ ಖ್ಯಾತ ನಟರೊಂದಿಗೆ ಅಭಿನಯಿಸುವ ಆಸಕ್ತಿಯನ್ನು ಮತ್ತೆ ವ್ಯಕ್ತಪಡಿಸಿದ್ದಾರೆ. ಗಲ್ಫ್ ನ್ಯೂಸ್‌ ನೊಂದಿಗೆ ಮಾತನಾಡಿದ ವಿಲ್ ಸ್ಮಿತ್ ಶಾರುಖ್ ಖಾನ್ ಕುರಿತು ಮಾತನಾಡುತ್ತ, ಹಿಂದಿ ಸಿನಿಮಾಗಳೊಂದಿಗೆ ಸೃಜನಶೀಲ ಬಂಧವನ್ನು ಬೆಸೆಯುವ ತಮ್ಮ ಆಶಯವನ್ನು ಪುನರುಚ್ಚರಿಸಿದ್ದಾರೆ.

“ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ನನಗೆ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಲಿ ಎಂಬುದು ನನ್ನ ಬಯಕೆ” ಎಂದು ವಿಲ್ ಸ್ಮಿತ್ ಹೇಳಿದ್ದಾರೆ. ಇದರೊಂದಿಗೆ, ಶಾರುಖ್ ಖಾನ್ ಮತ್ತು ವಿಲ್ ಸ್ಮಿತ್ ಭವಿಷ್ಯದಲ್ಲಿ ಒಟ್ಟಾಗಿ ಸಿನಿಮಾ ಮಾಡಬಹುದೆಂಬ ಊಹಾಪೋಹಗಳಿಗೆ ಮತ್ತೆ ರೆಕ್ಕೆ ಬಂದಿದೆ.

ಇತ್ತ ಶಾರುಖ್ ಖಾನ್ ಸದ್ಯ ಸಿದ್ಧಾರ್ಥ್ ಆನಂದ್ ನಿರ್ಮಾಣದ ‘ಕಿಂಗ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸುಹಾನಾ ಖಾನ್ ಹಾಗೂ ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವರ್ಷದ ಅಂತ್ಯದ ವೇಳೆಗೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ಸಲ್ಮಾನ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ಕೂಡ ಹಿಂದಿ ಸಿನಿಮಾದಲ್ಲಿ ನಟಿಸುವ ಆಸಕ್ತಿ ವ್ಯಕ್ತಪಡಿಸಿದ್ದಾಗಿ ವಿಲ್ ಸ್ಮಿತ್ ತಿಳಿಸಿದ್ದಾರೆ.

ಈ ಹಿಂದೆ ಸಲ್ಮಾನ್ ಖಾನ್–ಆಟ್ಲಿ ಕಾಂಬಿನೇಷನ್ ಸಿನಿಮಾದಲ್ಲಿ ವಿಲ್ ಸ್ಮಿತ್ ನಟಿಸುವ ಬಗ್ಗೆ ಸುದ್ದಿಗಳು ಹರಡಿದ್ದವು. ಆದರೆ ಆ ಸಿನಿಮಾ ನಂತರ ಸೆಟ್ಟೇರಿರಲಿಲ್ಲ.

ವಿಲ್ ಸ್ಮಿತ್ ‘ಬ್ಯಾಡ್ ಬಾಯ್ಸ್’, ‘ಮೆನ್ ಇನ್ ಬ್ಲ್ಯಾಕ್’ ಹಾಗೂ ‘ಐ ರೋಬೊಟ್’ ಸೇರಿದಂತೆ ಹಲವು ಚಿತ್ರಗಳ ಮೂಲಕ ಭಾರತದಲ್ಲೂ ಜನಪ್ರಿಯರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

Similar News