‘ಇಕ್ಕಿಸ್’ ಮಾಡಿದರೆ ಟ್ರೋಲ್, ‘ಕಾಶ್ಮೀರ್ ಫೈಲ್ಸ್’ ಮಾಡಿದರೆ ತೆರಿಗೆ ವಿನಾಯಿತಿ: ಹಿರಿಯ ನಟಿ ಸುಹಾಸಿನಿ ಮುಲಯ್ ಟೀಕೆ
Photo Credit ; bookmyshow.com
ಸಮಕಾಲೀನ ಸಿನಿಮಾ ಅತಿಯಾಗಿ ಬಲಪಂಥೀಯವಾಗಿದೆ ಮತ್ತು ಅಭೂತಪೂರ್ವ ಹಿಂಸೆಯನ್ನು ಪ್ರದರ್ಶಿಸುತ್ತಿದೆ ಎಂದು ದಿಲ್ ʼಚಾಹ್ತಾಹೆʼ, ʼಲಗಾನ್ʼ ಮತ್ತು ʼಜೋಧಾ ಅಕ್ಬರ್ʼ ನಂತಹ ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಸುಹಾಸಿನಿ ಮುಲಯ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಾಮ್ ರಾಘವನ್ ಅವರ ‘ಇಕ್ಕಿಸ್’ ಯುದ್ಧ ವಿರೋಧಿ ಸಂದೇಶವನ್ನು ನೀಡುತ್ತದೆ. ಮುಖ್ಯವಾಗಿ ಯುದ್ಧದಿಂದ ರಕ್ತಪಾತ ಮತ್ತು ನೋವಲ್ಲದೆ ಇನ್ನೇನು ಸಿಗಲಿದೆ? ಎನ್ನುವ ಪ್ರಶ್ನೆಯನ್ನು ಮುಂದಿಡುತ್ತದೆ. ಆದರೆ ಸಿನಿಮಾ ಬಿಡುಗಡೆಯಾದಂದಿನಿಂದ ಆನ್ಲೈನ್ ನಲ್ಲಿ ಟ್ರೋಲ್ (ಬೈಗುಳ/ಟೀಕೆಗೆ ಗುರಿಯಾಗುವುದು) ಆಗುತ್ತಿದೆ ಮತ್ತು ಟೀಕೆಯನ್ನು ಎದುರಿಸುತ್ತಿದೆ. ಸಿನಿಮಾದಲ್ಲಿ ನಟಿಸಿರುವ ಹಿರಿಯ ನಟಿ ಸುಹಾಸಿನಿ ಮುಲಾಯ್ ಈ ಟೀಕೆಗಳ ನಡುವೆ ತಮ್ಮ ಸಿನಿಮಾವನ್ನು ಸಮರ್ಥಿಸಿಕೊಂಡಿದ್ದಾರೆ. ಗುವಾಹಟಿ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಇಕ್ಕಿಸ್ ಸಿನಿಮಾವನ್ನು ಪ್ರಶಂಸಿಸಿದ್ದಾರೆ. “ಈ ಸಿನಿಮಾ ಪಾಕಿಸ್ತಾನಿಗಳನ್ನು ಭೂತಗಳು ಅಥವಾ ದೆವ್ವಗಳಂತೆ ತೋರಿಸಿಲ್ಲ. ಅವರನ್ನೂ ಮಾನವರಂತೆ ತೋರಿಸಿದೆ” ಎಂದು ಹೇಳಿದ್ದಾರೆ.
‘ಕಾಶ್ಮೀರ್ ಫೈಲ್’ ಸಿನಿಮಾಗೆ ವ್ಯತಿರಿಕ್ತವಾಗಿ ʼಇಕ್ಕಿಸ್ʼ ನಿರ್ಮಿಸಲಾಗಿದೆ ಎಂದು ಹೇಳಿರುವ ಅವರು, “ಸಿನಿಮಾದಲ್ಲಿ ನಟಿಸುವ ಮೊದಲೇ ಚಿತ್ರ ಸಾಹಿತ್ಯ ಬರೆದವರು ನನ್ನನ್ನು ಆಲ್ನೈನ್ನಲ್ಲಿ ಟ್ರೋಲ್ ಆಗುವ ಬಗ್ಗೆ ಎಚ್ಚರಿಸಿದ್ದರು. ಈ ತಲೆಮಾರಿನಲ್ಲಿ ಸಮಾಜದಲ್ಲಿ ನೆಲೆಸಿದ್ದರೆ ನೀವು ಟ್ರೋಲಿಂಗ್ ಎದುರಿಸಬೇಕು. ಹೀಗಾಗಿ ನೀವು ಅಂತಹ ಸಿನಿಮಾ ಮಾಡುವುದಿಲ್ಲ. ನೀವು ‘ದಿ ಕಾಶ್ಮೀರ್ ಫೈಲ್ಸ್’ನಂತಹ ಸಿನಿಮಾ ಮಾಡುತ್ತೀರಿ ಮತ್ತು ನಿಮ್ಮ ಮನೋರಂಜನಾ ತೆರಿಗೆಯಲ್ಲಿ ವಿನಾಯಿತಿ ಪಡೆಯುತ್ತೀರಿ” ಎಂದು ಅವರು ಹೇಳಿದ್ದಾರೆ.
ಸುಹಾಸಿನಿ ಅವರು ಈ ಮೊದಲು ‘ದಿಲ್ ಚಾಹ್ತಾ ಹೆ’, ‘ಲಗಾನ್’ ಮತ್ತು ‘ಜೋಧಾ ಅಕ್ಬರ್’ನಂತರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಯಾವ ರೀತಿಯ ಸಿನಿಮಾಗಳನ್ನು ಪ್ರಾಯೋಜಿಸಲಾಗುತ್ತಿದೆ ಎನ್ನುವುದನ್ನು ಅವರು ಜನರ ಗಮನಕ್ಕೆ ತಂದಿದ್ದಾರೆ.
“ರಾಜಕೀಯ ಸಿನಿಮಾ ಇಂದು ಸೈದ್ಧಾಂತಿಕವಾಗಿ ಬಲಪಂಥೀಯವಾಗಿದೆ ಮತ್ತು ಧಾರ್ಮಿಕ ಪ್ರಾಬಲ್ಯತೆ ಮೆರೆಯುವುದು ರೂಢಿಯಾಗಿದೆ. ಅಭೂತಪೂರ್ವ ಹಿಂಸಾಚಾರ ಪ್ರದರ್ಶಿಸಲಾಗುತ್ತಿದೆ. ಹಿಂದೆಂದೂ ಕಂಡಿರದ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ತೋರಿಸಲಾಗುತ್ತಿದೆ. ಮುಸ್ಲಿಮರು ಮತ್ತು ಅಲ್ಪಸಂಖ್ಯಾತರು ಮಾತ್ರವಲ್ಲ, ಸ್ಥಳೀಯರನ್ನೂ (ದೇಸಿ ಜನರನ್ನು) ‘ಪ್ರತ್ಯೇಕವಾಗಿರಿಸಿ’ ನೋಡಲಾಗುತ್ತಿದೆ.
ಇತ್ತೀಚೆಗೆ ಮಾಧ್ಯಮದ ಜೊತೆಗೆ ಮಾತನಾಡಿದ್ದ ನಿರ್ದೇಶಕ ಶ್ರೀರಾಮ್ ರಾಘವನ್ ಅವರೂ ಟ್ರೋಲಿಂಗ್ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. “ನನಗೆ ಅಚ್ಚರಿಯಾಗಿದೆ. ವಿಭಿನ್ನ ಮಂದಿ ವಿಭಿನ್ನ ಸಿನಿಮಾಗಳನ್ನು ತಯಾರಿಸುತ್ತಾರೆ. ನನಗೆ ಸೂಕ್ತವೆನಿಸಿದ್ದನ್ನು ನಾನು ಮಾಡಿದೆ. ನಾವು ಹೃದಯದಲ್ಲಿ ಅನುಭವಿಸಿದ ನೋವನ್ನು ಪರದೆ ಮೇಲೆ ಪ್ರತಿಧ್ವನಿಸಿದ್ದೇವೆ. ನಾನು ಈ ಬಗ್ಗೆ ಪರ ಅಥವಾ ಮತ್ತೊಂದರ ಬಗ್ಗೆ ಪರವಾಗಿಲ್ಲ. ಜನರು ತಮ್ಮ ಮನದಲ್ಲಿರುವ ಭಾವನೆಯನ್ನು ಅಭಿವ್ಯಕ್ತಿಪಡಿಸಬೇಕು ಎಂದು ನಾನು ಬಯಸಿದ್ದೇನೆ. ಇದು ಮಾನವೀಯ ಭಾವನೆ” ಎಂದು ಅವರು ಹೇಳಿದ್ದಾರೆ.