ವಿದ್ಯಾರ್ಥಿ ಜತೆ ಒಪ್ಪಿತ ಸಂಬಂಧ: ಶಿಕ್ಷಕಿಗೆ ಜಾಮೀನು ನೀಡಿದ ಮುಂಬೈ ಕೋರ್ಟ್
ಮುಂಬೈ: ನಗರದ ಪ್ರಖ್ಯಾತ ಶಾಲೆಯೊಂದರ ವಿದ್ಯಾರ್ಥಿಯ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಾಲೆಯ 40 ವರ್ಷ ವಯಸ್ಸಿನ ಶಿಕ್ಷಕಿಗೆ ವಿಶೇಷ ಪೋಕ್ಸೋ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇಬ್ಬರ ನಡುವೆ ಪರಸ್ಪರ ಒಪ್ಪಿತ ಸಂಬಂಧ ಇತ್ತು ಎನ್ನುವುದನ್ನು ಸಾಬೀತುಪಡಿಸುವ ಪುರಾವೆಗಳು ಎರಡೂ ಕಡೆಗಳಿಂದ ಲಭ್ಯವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಂತ್ರಸ್ತ ವಿದ್ಯಾರ್ಥಿ 17 ವರ್ಷ ಮೇಲ್ಪಟ್ಟವನಾಗಿದ್ದು, ಆರೋಪಿ ಶಿಕ್ಷಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ವಿದ್ಯಾರ್ಥಿ ಹಾಗೂ ಶಿಕ್ಷಕಿ ನಡುವಿನ ಸಂಬಂಧ ಇರುವುದಿಲ್ಲ. ಆದ್ದರಿಂದ ಯಾವುದೇ ರೀತಿಯ ಪ್ರಭಾವ ಬೀರುವ ಸಾಧ್ಯತೆ ವಿರಳ ಎಂದು ಹೇಳಿದೆ. ಈ ಪ್ರಕರಣದ ವಿಚಾರಣೆಗೆ ಸಮಯ ಹಿಡಿಯುವ ಹಿನ್ನೆಲೆಯಲ್ಲಿ ಆರೋಪಿ ಜೈಲಿನಲ್ಲಿ ಇರುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸಂತ್ರಸ್ತ ವಿದ್ಯಾರ್ಥಿ ಪರ ವಕೀಲರು ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿ, ಶಿಕ್ಷಕಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದಲ್ಲಿ, ಇಡೀ ಪ್ರಕರಣವನ್ನು ತಿರುಚಲು, ದಾಳಿ ಮಾಡಲು, ಬೆದರಿಕೆ ಹಾಕಲು ಹಾಗೂ ಆತನ ಜೀವಕ್ಕೆ ಹಾನಿ ಮಾಡಲು ಹಲವು ಮಾರ್ಗಗಳನ್ನು ಕಂಡುಕೊಳ್ಳಬಹುದು. ಜತೆಗೆ ಪುರಾವೆಯನ್ನು ತಿರುಚಲೂ ಸಾಧ್ಯತೆ ಇದೆ ಎಂದು ವಾದ ಮಂಡಿಸಿದರು.
"ಸಂತ್ರಸ್ತ ವಿದ್ಯಾರ್ಥಿಗೆ ಯಾವುದೇ ಸಂಭಾವ್ಯ ಅಪಾಯ ಸಾಧ್ಯತೆಯನ್ನು ತಪ್ಪಿಸಲು ಅಗತ್ಯ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಲಾಗುತ್ತದೆ. ಅರ್ಜಿದಾರರ ಮೇಲೆ ಕಟ್ಟುನಟ್ಟಿನ ಷರತ್ತುಗಳನ್ನು ವಿಧಿಸುವ ಮೂಲಕ ಅಭಿಯೋಜನೆ ಈ ಬಗ್ಗೆ ನಿಗಾ ವಹಿಸಬಹುದು" ಎಂದು ನ್ಯಾಯಾಧೀಶರು ಹೇಳಿದರು.
ಬಿಡುಗಡೆಗೆ ಷರತ್ತು ವಿಧಿಸಿರುವ ನ್ಯಾಯಾಧೀಶರು, ಆರೋಪಿ ಶಿಕ್ಷಕಿ ಯಾವುದೇ ವಿಧಾನದಲ್ಲಿ ವಿದ್ಯಾರ್ಥಿಯನ್ನು ಸಂಪರ್ಕಿಸಬಾರದು, ಭೇಟಿ ಮಾಡಬಾರದು ಅಥವಾ ಬೆದರಿಕೆ ಹಾಕಬಾರದು ಎಂದು ಸೂಚಿಸಿದ್ದಾರೆ. ಸಾಕ್ಷಿಗಳು ಅಥವಾ ಸಂತ್ರಸ್ತ ವಿದ್ಯಾರ್ಥಿಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆದರಿಸುವುದು ಅಥವಾ ಆಮಿಷ ಒಡ್ಡುವಂಥ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.