ಒಡಿಶಾ | ಕಾಲ್ತುಳಿತದಿಂದ ರಕ್ಷಿಸಿಕೊಳ್ಳಲು ತಮ್ಮ ಕಾಲಿಗೆ ಬುದ್ಧಿ ಹೇಳಿದ ಪೊಲೀಸರು: ಪ್ರತ್ಯಕ್ಷದರ್ಶಿ
ಪತ್ನಿಯನ್ನು ಕಳೆದುಕೊಂಡ ವ್ಯಕ್ತಿ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವುದು x.com/ANI
ಭುವನೇಶ್ವರ: ಪುರಿ ಜಗನ್ನಾಥ ದೇವಾಲಯದ ರಥೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ವೇಳೆ ಬಿದ್ದಿದ್ದ ಜನರನ್ನು ರಕ್ಷಿಸುವ ಬದಲು ಪೊಲೀಸರು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಘಟನಾ ಸ್ಥಳದಿಂದ ಪಲಾಯನ ಮಾಡಿದರು ಎಂದು ಕಾಲ್ತುಳಿತ ಸಂತ್ರಸ್ತರು ಮತ್ತು ಪ್ರತ್ಯಕ್ಷದರ್ಶಿಗಳು ಆಪಾದಿಸಿದ್ದಾರೆ. ಘಟನೆಯಲ್ಲಿ ಮೂವರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು.
"ಪೊಲೀಸ್ ಅಧಿಕಾರಿಗಳು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪಲಾಯನ ಮಾಡಿದ ಭಯಾನಕ ದೃಶ್ಯವನ್ನು ನಾನು ನೋಡಿದೆ. ನನ್ನ ಪತ್ನಿ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದಳು ಹಾಗೂ ಇತರ ಭಕ್ತರ ನೆರವಿನಿಂದ ನಾನು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ನಮ್ಮನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಗಳು ಎಲ್ಲೂ ಕಾಣಿಸಲಿಲ್ಲ" ಎಂದು ಘಟನೆಯಲ್ಲಿ ಖುರ್ದಾ ಜಿಲ್ಲೆಯ ಪತ್ನಿ ಪ್ರಭತಿ ಸಾಹು ಅವರನ್ನು ಕಳೆದುಕೊಂಡ ದಿಲೀಪ್ ಸಾಹು ವಿವರಿಸಿದರು.
ರಥೋತ್ಸವದ ಮರುದಿನ ಅಂದರೆ ಶನಿವಾರ ಗುಂಡಿಚಾ ದೇವಾಲಯದ ಸಮೀಪಕ್ಕೆ ಬಂದಾಗ ರಥದ ಮುಂದೆ ಉತ್ಸವಮೂರ್ತಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ಸಂದರ್ಭ ಮುಂಜಾನೆ 4 ರಿಂದ 4.30ರ ನಡುವೆ ಈ ದುರಂತ ಸಂಭವಿಸಿದೆ ಎಂದು ಹೇಳಿದರು.
ಸೇರಿದ ಭಕ್ತಸ್ತೋಮವನ್ನು ನಿಯಂತ್ರಿಸಲು ಸಾಧ್ಯವಾಗದೇ ಅರಾಜಕ ಸ್ಥಿತಿ ನಿರ್ಮಾಣವಾಯಿತು ಎಂದು ಘಟನೆಯಲ್ಲಿ ಉಳಿದುಕೊಂಡವರು ತಿಳಿಸಿದ್ದಾರೆ. ಸರ್ಕಾರ ಉತ್ಸವಕ್ಕೆ ಮುನ್ನ ಹಲವು ಅಣಕು ಪಥಸಂಚಲನಗಳನ್ನು ನಡೆಸಿದ್ದರೂ, ಪರಿಸ್ಥಿತಿಯನ್ನು ನಿಭಾಯಿಸಲು ಆ ಸ್ಥಳದಲ್ಲಿ ಯಾರೂ ಇರಲಿಲ್ಲ ಎಂದು ದೂರಿದರು.
ದೊಡ್ಡ ಭಕ್ತಸಮೂಹ ಸೇರಿದ್ದರೂ, ಎಲ್ಲೂ ಪೊಲೀಸರು ಕಾಣಲಿಲ್ಲ. ಅದು ರವಿವಾರವಾಗಿದ್ದು, ಭಕ್ತರು ಮತ್ತಷ್ಟು ಹೆಚ್ಚುತ್ತಿದ್ದರು. ಭಕ್ತರು ಬಿದ್ದು ಚೀರಾಡುತ್ತಿದ್ದಾಗ ಕೂಡಾ ಯಾವುದೇ ವ್ಯವಸ್ಥಿತ ಸ್ಪಂದನೆ ಸಿಕ್ಕಿಲ್ಲ ಎಂದು ಆಪಾದಿಸಿದರು.