ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ತಾಲ್ಲೂಕು ಘಟಕದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ಮೂಡುಬಿದಿರೆ: ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕದ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಗುರುವಾರ ಮೂಡುಬಿದಿರೆಯ ಸಮಾಜ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಸಮಿತಿಯ ಖಜಾಂಚಿ ಸಲೀಂ ಹಂಡೆಲ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಹಾಜರಿದ್ದ ಸದಸ್ಯರು ಏಕಮತದಿಂದ ಲೆಕ್ಕಪತ್ರವನ್ನು ಅಂಗೀಕರಿಸಿದರು.
ಕೇಂದ್ರ ಸಮಿತಿಯಿಂದ (JFCC) ನೇಮಕಗೊಂಡ ಚುನಾವಣಾ ಅಧಿಕಾರಿಗಳಾದ ಜನಾಬ್ ಇಕ್ಬಾಲ್ ಬಂಟ್ವಾಳ ಹಾಗೂ ಜನಾಬ್ ಅಶ್ಫಾಕ್ ಕಾರ್ಕಳ ಅವರು ಚುನಾವಣಾ ಪ್ರಕ್ರಿಯೆ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭ 2025-27ನೇ ಸಾಲಿಗೆ 21 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಏಕಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯಿಂದ 8 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
2025–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೇಖ್ ನೂರುದ್ದೀನ್, ಉಪಾಧ್ಯಕ್ಷರಾಗಿ ಮುಹಮ್ಮದ್ ಆರಿಫ್ ಮತ್ತು ಅಬ್ದುಲ್ ಅಝೀಝ್ ಮಲಿಕ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಅಶ್ರಫ್ ಮರೋಡಿ, ಸಹ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಕಿರ್, ಖಜಾಂಚಿಯಾಗಿ ಶೇಖ್ ಅಬ್ದುಲ್ ಗಫೂರ್, ಆಯೋಜನಾ ಕಾರ್ಯದರ್ಶಿಯಾಗಿ ರಿಝ್ವಾನ್ ಅಹ್ಮದ್, ಪತ್ರಿಕಾ ಕಾರ್ಯದರ್ಶಿಯಾಗಿ ಅಬುಲ್ ಆಲಾ ಪುತ್ತಿಗೆ ಅವರು ಆಯ್ಕೆಯಾದರು.
ಸಭೆಯನ್ನು ಸಲೀಂ ಹಂಡೆಲ್ ಅವರು ಕಿರಾಅತ್ ಮೂಲಕ ಚಾಲನೆ ನೀಡಿದರು. ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ ರವೂಫ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಜನಾಬ್ ಶೇಖ್ ಅಬ್ದುಲ್ ಗಫೂರ್ ಅವರು ಪ್ರಸ್ತಾವನೆ ಗೈದು ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಒಟ್ಟು 25 ಮಂದಿ ಸದಸ್ಯರು ಭಾಗವಹಿಸಿದ್ದರು.