×
Ad

ಮಂಗಳೂರು: ಅಪಘಾತದ ವೇಳೆ ನೆರವಾದ ಬಾಲಕಿಯ ಸಮಯಪ್ರಜ್ಞೆಗೆ ಸಿಎಂ ಸಿದ್ದರಾಮಯ್ಯ ಶ್ಲಾಘನೆ

Update: 2024-09-09 22:26 IST

ಮಂಗಳೂರು, ಸೆ.9: ಕಿನ್ನಿಗೋಳಿ ಸಮೀಪ ಸೆ.6ರಂದು ನಡೆದ ರಸ್ತೆ ಅಪಘಾತದ ವೇಳೆ ತಕ್ಷಣ ಸಹಾಯಕ್ಕೆ ಧಾವಿಸಿದ ಬಾಲಕಿಯೊಬ್ಬಳ ಸಮಯಪ್ರಜ್ಞೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದ್ದಾರೆ.

ಈ ಬಗ್ಗೆ ‘ಎಕ್ಸ್’ನಲ್ಲಿಂದು ಪೋಸ್ಟ್‌ವೊಂದನ್ನು ಹಾಕಿರುವ ಮುಖ್ಯಮಂತ್ರಿ, ‘ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಢಿಕ್ಕಿ ಹೊಡೆದಿದೆ. ಈ ವೇಳೆ ಅಲ್ಲೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಯಾರ ಸಹಾಯಕ್ಕೂ ಕಾಯದೆ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಬಾಲಕಿಯ ಸಮಯಪ್ರಜ್ಞೆ, ಧೈರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಅಪಘಾತ ಸಂಭವಿಸಿದ ಸ್ಥಳಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಜನರು ಸುತ್ತಲೂ ನಿಂತು ಮೊಬೈಲ್ ಮೂಲಕ ವೀಡಿಯೊ ಮಾಡುವುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಕಂಡಿದ್ದೆ, ಇದು ಭವಿಷ್ಯದ ದಿನಗಳ ಬಗ್ಗೆ ನನ್ನಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ. ಅಪಘಾತ, ಬೆಂಕಿ ಅನಾಹುತ, ಹೃದಯಾಘಾತ ಇಂತಹ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪಾಲಿಗೆ ಪ್ರತೀ ಸೆಕೆಂಡ್ ಕೂಡ ಅಮೂಲ್ಯ. ಈ ವೇಳೆ ಮಾನವೀಯತೆ ಮರೆಯದಿರಿ’ ಎಂದು ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

ಕಿನ್ನಿಗೋಳಿ ಉಲ್ಲಂಜೆ ಕಟೀಲು ಹೆದ್ದಾರಿಯ ಕಾಫಿ ಕಾಡು ರಾಮನಗರ 2ನೇ ಅಡ್ಡರಸ್ತೆ ಬಳಿ ಸೆ.6ರಂದು ರಸ್ತೆ ದಾಟುತ್ತಿದ್ದ ರಾಜರತ್ನಾಪುರ ನಿವಾಸಿ ಚೇತನಾ(35) ಎಂಬವರಿಗೆ ಆಟೊ ರಿಕ್ಷಾ ಢಿಕ್ಕಿ ಹೊಡೆದಿದೆ. ಈ ವೇಳೆ ರಿಕ್ಷಾ ನಿಯಂತ್ರಣ ತಪ್ಪಿ ಮಹಿಳೆಯ ಮೇಲೆಯೇ ಉರುಳಿಬಿದ್ದಿದೆ. ಇದೇ ವೇಳೆ ಆ ದಾರಿಯಾಗಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳು ತಕ್ಷಣ ನೆರವಿಗೆ ಧಾವಿಸಿದ್ದಳು. ಆಟೋದಲ್ಲಿದ್ದವರು ಎದ್ದೇಳುತ್ತಿದ್ದಾಗ ರಿಕ್ಷಾವನ್ನು ಎತ್ತಲು ಬಾಲಕಿ ನೆರವಾಗಿದ್ದಲ್ಲದೆ, ಗಾಯಾಳುವಿಗೆ ನೆರವಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News