×
Ad

ಮಂಗಳೂರು | ಬ್ಯೂಟಿಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ; ಹಲ್ಲೆ, ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ: ಆರೋಪ

Update: 2025-08-08 14:41 IST

ಮಂಗಳೂರು: ನಗರದ ಬ್ಯೂಟಿಪಾರ್ಲರ್‌ನ ಮಾಲಕಿ ತನ್ನ ಮೇಲೆ ಹಲ್ಲೆ ನಡೆಸಿ, ತನ್ನ ಬೆತ್ತಲೆ ವೀಡಿಯೋ ಮಾಡಿ ಬೆದರಿಕೆ ಮಾಡಿರುವುದಾಗಿ ಸಂತ್ರಸ್ತ ಮಹಿಳೆಯೊಬ್ಬರು ಮಾಧ್ಯಮದೆದುರು ಆರೋಪ ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಈ ಆರೋಪ ಮಾಡಿರುವ ಮಹಿಳೆ, ಕಳೆದ ಒಂದೂವರೆ ತಿಂಗಳ ಹಿಂದೆ ನಗರದ ಹಂಪನಕಟ್ಟೆ ಮತ್ತು ಜ್ಯೋತಿ ಸರ್ಕಲ್ ನಡುವಿನ ಯುನಿಸೆಕ್ಸ್ ಬ್ಯೂಟಿಪಾರ್ಲರ್‌ನಲ್ಲಿ ಬ್ಯೂಟಿಶಿಯನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾಗಿ ಹೇಳಿದರು.

ಬ್ಯೂಟಿಶಿಯನ್ ಕೋರ್ಸ್ ಮಾಡಿಕೊಂಡಿರುವ ತಾನು ಕೆಲಸಕ್ಕೆ ಸೇರುವ ಸಂದರ್ಭ ಆ ಬ್ಯೂಟಿಪಾರ್ಲರ್‌ನ ಮಾಲಕರು, ಬರುವ ಗ್ರಾಹಕರೊಂದಿಗೆ ಆತ್ಮೀಯವಾಗಿದ್ದುಕೊಂಡು ಅವರು ಬಯಸುವ ಸೇವೆಯನ್ನು ಒದಗಿಸುವಂತೆ ಮತ್ತು ಅವರಿಂದ 500ರೂ.ನಿಂದ 1000 ರೂ.ವರೆಗೆ ಸೇವಾ ಭತ್ತೆಯಾಗಿ ಪಡೆಯಲು ಅವಕಾಶ ನೀಡಿದ್ದರು. ಕಳೆದ ಸೋಮವಾರ ಪರಿಚಯದ ಪುರುಷ ಗ್ರಾಹಕರೊಬ್ಬರು ಬಂದು ಮಸಾಜ್ ಮಾಡಿಸಿಕೊಂಡ ಸಂದರ್ಭ ಮಾತನಾಡಿದ್ದನ್ನು ವಾಯ್ಸ್ ರೆಕಾರ್ಡ್ ಮಾಡಿಕೊಂಡು ಮಾಲಕರಿಗೆ ನೀಡಿದ್ದಾರೆ. ಆ ಸಂದರ್ಭ ಪಾರ್ಲರ್‌ನ ಮಾಲಕರ ಪತ್ನಿ ಬಂದು ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ನನ್ನ ಬೆತ್ತಲೆ ವೀಡಿಯೋ ಮಾಡಿ ಬೆದರಿಕೆಯೊಡ್ಡಿದರು. ಮರುದಿನ ನನ್ನ ಪತಿಯನ್ನು ಕರೆಸಿ ವೀಡಿಯೋ ತೋರಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಮೂರು ವರ್ಷದ ಮಗುವನ್ನೂ ಹೊಂದಿರುವ ನಾನು ಈ ಬಗ್ಗೆ ನೊಂದು ಆತ್ಮಹತ್ಯೆಗೂ ಮುಂದಾಗಿದ್ದೆ. ಆ ಸಂದರ್ಭ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರನ್ನು ಸಂಪರ್ಕಿಸಿ ನಡೆದ ವಿಚಾರ ತಿಳಿಸಿದ್ದು, ಬಂದರು ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದು ಮಹಿಳೆ ಕಣ್ಣೀರು ಹಾಕುತ್ತಾ ವಿವರ ನೀಡಿದರು.

ಅಲ್ಲಿ ಕೆಲಸ ಮಾಡುವ ಇತರ ಯುವತಿ, ಯುವಕರ ಮೇಲೂ ಇಂತಹ ಹಲ್ಲೆ, ಬೆದರಿಕೆ ನೀಡುವ ಕಾರ್ಯ ನಡೆಯುತ್ತಿದೆ. ಆದರೆ ಮರ್ಯಾದೆ ಹಾಗೂ ಉದ್ಯೋಗ ಕಳೆದುಕೊಳ್ಳುವ ಭಯದಿಂದ ಯಾರೂ ಮಾತನಾಡುವುದಿಲ್ಲ. ನಾನು ಮಾನಸಿಕವಾಗಿ ನೊಂದಿದ್ದೇನೆ. ಈ ರೀತಿಯ ಪರಿಸ್ಥಿತಿ ಯಾವ ಮಹಿಳೆಗೂ ಬರಬಾರದು ಎಂದು ಆಕೆ ಹೇಳಿದರು.

‘ಬ್ಯೂಟಿಪಾರ್ಲರ್ ಹೆಸರಿನಲ್ಲಿ ಮಸಾಜ್ ದಂಧೆ ನಡೆಸುತ್ತಿರುವುದು ಸಂತ್ರಸ್ತೆ ಮಹಿಳೆಯ ಹೇಳಿಕೆಯಿಂದ ವ್ಯಕ್ತವಾಗಿದೆ. ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬರುವ ಮಹಿಳೆ ಹಾಗೂ ಯುವತಿಯರನ್ನು ಬೆದರಿಸುವ ಮೂಲಕ ಮಸಾಜ್ ದಂಧೆ ನಡೆಸಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News