ಜಪಾನ್ ಚುನಾವಣೆ: ಪ್ರಧಾನಿ ಸಾನೆ ತಕೈಚಿ ಪಕ್ಷಕ್ಕೆ ಭರ್ಜರಿ ಬಹುಮತ
PC: x.com/News5PH
ಟೋಕಿಯೊ: ಜಪಾನ್ ಸಂಸತ್ತಿನ ಕೆಳಮನೆಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಸಾನೆ ತಕೈಚಿ ನೇತೃತ್ವದ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‌ಡಿಪಿ) ಭರ್ಜರಿ ಬಹುಮತ ಗಳಿಸಿದೆ.
ಪ್ರಧಾನಿ ಸಾನೆ ತಕೈಚಿ ಜನಪ್ರಿಯತೆಯಿಂದಾಗಿ ಸಂಸತ್ತಿನ ಕೆಳಮನೆಯಲ್ಲಿ ಎಲ್‌ಡಿಪಿ ಮೂರನೇ ಎರಡರಷ್ಟು ಬಹುಮತ ಗಳಿಸಿದೆ.
ಭರ್ಜರಿ ಗೆಲುವು ಸಾಧಿಸಿದ ಬಳಿಕ ಜಪಾನ್ ನ ಸರ್ಕಾರಿ ಟೆಲಿವಿಷನ್ ಜಾಲ ಎನ್ಎಚ್‌ಕೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಸಾನೆ ತಕೈಚಿ, ಜಪಾನ್ ದೇಶವನ್ನು ಪ್ರಬಲ ಮತ್ತು ಸಮೃದ್ಧ ದೇಶವಾಗಿ ರೂಪಿಸುವ ನಿಟ್ಟಿನಲ್ಲಿ ನೀತಿಗಳನ್ನು ಜಾರಿಗೊಳಿಸುತ್ತೇನೆ ಎಂದು ಹೇಳಿದರು.
ಜಪಾನ್ ಸಂಸತ್ತಿನ ಕೆಳಮನೆ 456 ಸದಸ್ಯಬಲ ಹೊಂದಿದ್ದು, ಇದರಲ್ಲಿ ಎಲ್‌ಡಿಪಿ ಏಕಾಂಗಿಯಾಗಿ 316 ಸ್ಥಾನಗಳನ್ನು ಗೆದ್ದಿದೆ ಎಂದು ಸೋಮವಾರ ಪ್ರಕಟಿಸಲಾಗಿದೆ. ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಎಲ್‌ಡಿಪಿ 261 ಸ್ಥಾನಗಳ ಬಹುಮತದ ರೇಖೆಯನ್ನು ಸುಲಭವಾಗಿ ದಾಟಿದೆ. ಈ ಗೆಲುವಿನೊಂದಿಗೆ ಮಾಜಿ ಪ್ರಧಾನಿ ಯಶುಹಿರೊ ನಕಸೋನ್ 1986ರಲ್ಲಿ ಗಳಿಸಿದ್ದ 300 ಸ್ಥಾನಗಳ ದಾಖಲೆ ಮುರಿದಂತಾಗಿದೆ. ಇದು 1955ರಿಂದೀಚೆಗೆ ಯಾವುದೇ ಪಕ್ಷಕ್ಕೆ ದೊರಕಿದ ಅತ್ಯಧಿಕ ಬಹುಮತವಾಗಿದೆ.
ಎಲ್‌ಡಿಪಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಜತೆಗೆ ಅದರ ಹೊಸ ಮಿತ್ರಪಕ್ಷವಾದ ಜಪಾನ್ ಇನ್ನೋವೇಶನ್ ಪಾರ್ಟಿ 36 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. ಇದರಿಂದಾಗಿ ಎಲ್‌ಡಿಪಿ ನೇತೃತ್ವದ ಮೈತ್ರಿಕೂಟ 352 ಸ್ಥಾನಗಳನ್ನು ಗಳಿಸಿ ಸದನದಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆದಂತಾಗಿದೆ.