×
Ad

ಗಾಝಾ: ಪ್ರಖ್ಯಾತ ಹೃದ್ರೋಗ ತಜ್ಞ, ಕುಟುಂಬ ಇಸ್ರೇಲ್ ದಾಳಿಯಲ್ಲಿ ಮೃತ್ಯು

Update: 2025-07-04 07:45 IST

PC: x.com/leahmcelrath

ಗಾಝಾ: ಕರ್ತವ್ಯದಿಂದ ವಿಶ್ರಾಂತಿ ಪಡೆದು ಕುಟುಂಬದ ಜತೆ ಕಾಲ ಕಳೆಯುತ್ತಿದ್ದ ಪ್ರಖ್ಯಾತ ಹೃದ್ರೋಗ ತಜ್ಞ ಡಾ.ಮರ್ವಾನ್ ಸುಲ್ತಾನ್ ಹಾಗೂ ಅವರ ಕುಟುಂಬ ಸದಸ್ಯರು ಬುಧವಾರ ಮಧ್ಯಾಹ್ನ ನಡೆದ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಡಾ.ಮರ್ವಾನ್ ಕಳೆದ 50 ದಿನಗಳಲ್ಲಿ ಇಸ್ರೇಲ್ ದಾಳಿಗೆ ಬಲಿಯಾದ 70ನೇ ವೈದ್ಯರಾಗಿದ್ದಾರೆ ಎಂದು ಫೆಲೆಸ್ತೀನಿ ನಿಗಾ ಗುಂಪು ಪ್ರಕಟಿಸಿದೆ.

ಘಟನೆಯ ಬೆನ್ನಲ್ಲೇ ಗಾಝಾ ನಗರದ ಅಲ್-ಶಿಫಾ ಆಸ್ಪತ್ರೆ, ಕುಟುಂಬ ಸದಸ್ಯರು, ಸಹೋದ್ಯೋಗಿಗಳು ಪಾರ್ಥಿವ ಶರೀರದ ಸುತ್ತ ಸೇರಿ ಕಂಬನಿ ಮಿಡಿಯುವ ದೃಶ್ಯ ಹೃದಯ ವಿದ್ರಾವಕವಾಗಿತ್ತು. ಡಾ.ಮರ್ವಾನ್ ಅವರ ಪತ್ನಿ, ಪುತ್ರಿ, ಅಳಿಯ ಹಾಗೂ ಸಹೋದರಿ ಕೂಡಾ ದಾಳಿಯಲ್ಲಿ ಮೃತಪಟ್ಟಿದ್ದಾರೆ.

"ನನ್ನ ತಂದೆ ಕೇವಲ ವೈದ್ಯ ವೃತ್ತಿ ಮಾಡುತ್ತಿದ್ದರು; ರೋಗಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದ ವೈದ್ಯರಾಗಿದ್ದರು" ಎಂದು ಪುತ್ರ ಅಹ್ಮದ್ (17) ಗದ್ಗದಿತರಾದರು. ಡಾ.ಮರ್ವಾನ್ ಹಾಗೂ ಇತರ ಐದು ಸ್ಥಳಾಂತರಿತ ಕುಟುಂಬಗಳು ಗಾಝಾ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಆಶ್ರಯ ಪಡೆದಿದ್ದರು. ಈ ಅಪಾರ್ಟ್ಮೆಂಟ್ ಮೇಲೆ ಇಸ್ರೇಲ್ ಬಾಂಬ್ ಬಡಿದು ಸುಲ್ತಾನ್ ಹಾಗೂ ಕುಟುಂಬದ ನಾಲ್ವರು ಮೃತಪಟ್ಟರು.

ಉತ್ತರ ಗಾಝಾದಲ್ಲಿರುವ ಅತಿದೊಡ್ಡ ವೈದ್ಯಕೀಯ ಸಂಸ್ಥೆಗಳಲ್ಲೊಂದಾದ ಇಂಡೋನೇಷ್ಯಾ ಮೂಲದ ಆಸ್ಪತ್ರೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಮರ್ವಾನ್, 2023ರ ಅಕ್ಟೋಬರ್‌ನಿಂದ ಯುದ್ಧದಲ್ಲಿ ಗಾಯಗೊಂಡವರಿಗೆ ಮತ್ತು ಅಸ್ವಸ್ಥರಿಗೆ ಚಿಕತ್ಸೆ ನೀಡುತ್ತಿದ್ದರು.

ಅವರೊಬ್ಬ ಅಪರೂಪದ ವೈದ್ಯ ಎಂದು ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಡಾ.ಮುನೀರ್ ಬ್ರೂಶ್ ಕಂಬನಿ ಮಿಡಿದಿದ್ದಾರೆ. ಎನ್‌ಬಿಸಿ ನ್ಯೂಸ್ ಜತೆ ಮಾತನಾಡಿದ ಅವರು, "ಅಪಾರ ಅನುಭವ ಹಾಗೂ ಆಳವಾದ ಆತ್ಮಸಾಕ್ಷಿ ಹೊಂದಿದ್ದವರು. ನಾವು ಕೇವಲ ವೈದ್ಯರೊಬ್ಬರನ್ನು ಕಳೆದುಕೊಂಡಿದ್ದಲ್ಲ, ಹಲವು ಮಂದಿಯ ಜೀವನಾಡಿಯಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ" ಎಂದು ಬಣ್ಣಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News