ಪ್ರವಾಸಿ ಕೂಟ ವಿಟ್ಲ (ರಿ) ಬಹರೈನ್ ಘಟಕದಿಂದ ತುರ್ತು ರಕ್ತದಾನ ಶಿಬಿರ
ಬಹರೈನ್ : ಪ್ರವಾಸಿ ಕೂಟ ವಿಟ್ಲ (ರಿ) ಬಹರೈನ್ ಘಟಕದ ವತಿಯಿಂದ ಮಾನವೀಯ ಸೇವೆಯ ಭಾಗವಾಗಿ ಬಹರೈನ್‌ನ ಸರ್ಕಾರಿ ಆಸ್ಪತ್ರೆಯಾದ ಸಲ್ಮಾನಿಯ ಮೆಡಿಕಲ್ ಕಾಂಪ್ಲೆಕ್ಸ್‌ನಲ್ಲಿ ಮಾ.9 ರಂದು ತುರ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಪ್ರವಾಸಿ ಕೂಟ ವಿಟ್ಲ (ರಿ) ಬಹರೈನ್ ಘಟಕದ ಅಧ್ಯಕ್ಷ ಶಾಫಿ ಕಂಬಳಬೆಟ್ಟು ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಅನೇಕ ಸ್ವಯಂಸೇವಕರು ಹಾಗೂ 300 ಕ್ಕೂ ಹೆಚ್ಚು ರಕ್ತದಾನಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.
ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತದ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರವಾಸಿ ಕೂಟ ವಿಟ್ಲ (ರಿ) ಸದಸ್ಯರೊಂದಿಗೆ ಇತರ ಸಂಘಟನೆಗಳ ಪ್ರತಿನಿಧಿಗಳೂ ಭಾಗವಹಿಸಿ ಸಹಕಾರ ನೀಡಿದರು.
ಮುಂದಿನ ದಿನಗಳಲ್ಲಿಯೂ ಇಂತಹ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಉದ್ದೇಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರವಾಸಿ ಕೂಟ ವಿಟ್ಲ (ರಿ) ಬಹರೈನ್ ಘಟಕವು ವಿವಿಧ ಸಮಾಜಸೇವಾ ಚಟುವಟಿಕೆಗಳ ಮೂಲಕ ಅನಿವಾಸಿ ಕನ್ನಡಿಗರ ನಡುವೆ ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.