×
Ad

ಯುಎಇ ಲಾಟರಿಯಲ್ಲಿ 240 ಕೋಟಿ ರೂ. ಗೆದ್ದ ಭಾರತೀಯ; ಭಾರತದಲ್ಲಿ ಹೂಡಿಕೆ ಮಾಡಬೇಡಿ, ತೆರಿಗೆ ಹೆಚ್ಚಿದೆ ಎಂದು ಸಲಹೆ ನೀಡಿದ ಜನರು!

Update: 2025-10-29 16:01 IST

Photo credit: X/@theuaelottery

ದುಬೈ: ದುಬೈನಲ್ಲಿ ವಾಸಿಸುವ ಭಾರತೀಯ ಯುವಕ ಅನಿಲ್‌ ಕುಮಾರ್ ಬೊಲ್ಲಾ ಅವರಿಗೆ ಅದೃಷ್ಟದ ಲಾಟರಿಯಲ್ಲಿ 240 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಹುಮಾನ ಸಿಕ್ಕಿದೆ. 100 ಮಿಲಿಯನ್ ದಿರ್ಹಮ್‌ ಮೌಲ್ಯದ ಲಾಟರಿಯನ್ನು ಅವರು 23ನೇ “ಲಕ್ಕಿ ಡೇ ಡ್ರಾ”ಯಲ್ಲಿ ಗೆದ್ದಿದ್ದಾರೆ.

29 ವರ್ಷದ ಅನಿಲ್‌ಕುಮಾರ್ ಬೊಲ್ಲಾ , ತಮ್ಮ ತಾಯಿಯ ಹುಟ್ಟುಹಬ್ಬದ ಸಂಖ್ಯೆಯನ್ನು ಲಾಟರಿ ಸಂಖ್ಯೆಯಾಗಿ ಆಯ್ಕೆ ಮಾಡಿದ್ದು, ಅದೇ ಅವರಿಗೆ ಅದೃಷ್ಟ ತಂದುಕೊಟ್ಟಿದೆ. ಯುಎಇ ಲಾಟರಿ ಸಂಸ್ಥೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅನಿಲ್‌ಕುಮಾರ್ ಬೊಲ್ಲಾ ಅವರ ಸಂದರ್ಶನ ವೀಡಿಯೊವನ್ನು ಹಂಚಿಕೊಂಡಿದ್ದು, ವಿಜೇತರ ಘೋಷಣೆ ಸಂದರ್ಭದ ಅವರ ಭಾವನಾತ್ಮಕ ಪ್ರತಿಕ್ರಿಯೆ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

“ಯಾವುದೇ ಮ್ಯಾಜಿಕ್ ಅಥವಾ ಇನ್ನೇನೋ ಮಾಡಿಲ್ಲ, ನಾನು ಕೇವಲ ‘ಈಸಿ ಪಿಕ್’ ಆಯ್ಕೆ ಮಾಡಿಕೊಂಡೆ. ಕೊನೆಯ ಸಂಖ್ಯೆ ನನ್ನ ತಾಯಿಯ ಹುಟ್ಟುಹಬ್ಬದ್ದು,” ಎಂದು ನಗುತ್ತಾ ಅನಿಲ್‌ಕುಮಾರ್ ಬೊಲ್ಲಾ ಹೇಳಿದ್ದಾರೆ.

“ನಿಜವಾಗಿಯೂ ನಾನು ಗೆದ್ದಿದ್ದೇನೆ ಎಂಬುದನ್ನು ನಂಬಲು ನನಗೆ ಸಾಧ್ಯವಾಗಲಿಲ್ಲ,” ಎಂದು ಅವರು ನೆನಪಿಸಿಕೊಂಡರು.

ತಮ್ಮ ಗೆಲುವಿನ ಮೊತ್ತವನ್ನು ಜಾಣ್ಮೆಯಿಂದ ನಿರ್ವಹಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು. “ಈ ಹಣವನ್ನು ಹೇಗೆ ಹೂಡಿಕೆ ಮಾಡಬೇಕು, ಸರಿಯಾದ ರೀತಿಯಲ್ಲಿ ಖರ್ಚು ಮಾಡಬೇಕು ಎಂಬುದನ್ನು ಯೋಚಿಸುತ್ತಿದ್ದೇನೆ. ಈಗ ನನ್ನ ಕನಸುಗಳತ್ತ ಗಮನ ಕೇಂದ್ರೀಕರಿಸಲು ಬಯಸುತ್ತೇನೆ,” ಎಂದು ಅನಿಲ್‌ಕುಮಾರ್ ಬೊಲ್ಲಾ ಹೇಳಿದರು.

ಅನಿಲ್ ಕುಮಾರ್ ಬೊಲ್ಲಾಗೆ ಐಷಾರಾಮಿ ಕಾರು ಖರೀದಿಸುವ ಮತ್ತು 7 ಸ್ಟಾರ್ ಹೋಟೆಲ್‌ನಲ್ಲಿ ಸಂಭ್ರಮವನ್ನು ಆಚರಿಸುವ ಆಸೆಯಿದೆ. “ಆದರೆ ಮೊದಲು ನನ್ನ ಕುಟುಂಬಕ್ಕಾಗಿ ವಿಶೇಷವಾದದ್ದನ್ನು ಮಾಡಬೇಕು. ಅವರನ್ನು ಯುಎಇಗೆ ಕರೆದು ನನ್ನ ಜೀವನವನ್ನು ಅವರೊಂದಿಗೆ ಆನಂದಿಸಲು ಬಯಸುತ್ತೇನೆ,” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಗೆಲುವಿನ ಮೊತ್ತದ ಒಂದು ಭಾಗವನ್ನು ದಾನ ಮಾಡಲೂ ಬೊಲ್ಲಾ ನಿರ್ಧರಿಸಿದ್ದು, “ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ. ಪ್ರತಿಯೊಬ್ಬ ಆಟಗಾರನು ಆಟವಾಡುವುದನ್ನು ಮುಂದುವರಿಸಬೇಕು. ಒಂದು ದಿನ ಅದೃಷ್ಟ ಖಂಡಿತ ಕೈಹಿಡಿಯುತ್ತದೆ” ಎಂದು ಅವರು ಹೇಳಿದರು.

ಈ ವೈರಲ್ ವೀಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವಾರು ಬಳಕೆದಾರರು ಬೊಲ್ಲಾ ಅವರನ್ನು ದುಬೈನಲ್ಲಿಯೇ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಬೇಡಿ, ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

"ಅವರು ಭಾರತಕ್ಕೆ ಹಿಂತಿರುಗುವುದಿಲ್ಲ. ಇಲ್ಲಿ ಅವರಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

"ನೀವು ದುಬೈನಲ್ಲಿ ಗೆದ್ದಿದ್ದೀರಿ. ಭಾರತದಲ್ಲಿ ಹೂಡಿಕೆ ಮಾಡಬೇಡಿ! ನಿಮಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಕಡಿಮೆ ತೆರಿಗೆ ವಿಧಿಸುವ ಸ್ಥಳದಲ್ಲಿ ಹೂಡಿಕೆ ಮಾಡಿ. ಬುದ್ಧಿವಂತರಾಗಿರಿ," ಮತ್ತೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾರೆ.

“ಅನಿಲ್‌ಕುಮಾರ್ ಬೊಲ್ಲಾ ಅವರ ಅದೃಷ್ಟದ ಹಿಂದೆ ತಾಯಿಯ ಪ್ರಾರ್ಥನೆ ಇದೆ. ತಾಯಿಯ ಪ್ರೀತಿಗಿಂತ ಶಕ್ತಿಯುತವಾದದ್ದು ಮತ್ತೇನೂ ಇಲ್ಲ,” ಎಂದು ಮತ್ತೋರ್ವ ವ್ಯಕ್ತಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News