ಬೇಲೂರು : ಪತ್ನಿಯನ್ನೇ ಕೊಲೆ ಮಾಡಿದ ಪತಿ
ಬೇಲೂರು, ಫೆ.26: ಪತ್ನಿ ಮೇಲೆ ಅನುಮಾನ ಹಾಗೂ ನಿರಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಬೇಲೂರು ತಾಲೂಕಿನ ರಾಜನಸಿರಿಯೂರು ಗ್ರಾಮದಲ್ಲಿ ನಡೆದಿದೆ.
ಚನ್ನಮ್ಮ (34) ಮೃತ ಮಹಿಳೆ. ಮಧು (40) ಬಂಧಿತ ಆರೋಪಿ.
ಸುಮಾರು ಹದಿನೈದು ವರ್ಷಗಳ ಹಿಂದೆ ರಾಜನಸಿರಿಯೂರು ಗ್ರಾಮದ ಮಧು ಜೊತೆ ಚನ್ನಮ್ಮ ವಿವಾಹವಾಗಿದ್ದರು. ದಾಂಪತ್ಯ ಜೀವನದ ಆರಂಭಿಕ ವರ್ಷಗಳಲ್ಲಿ ಎಲ್ಲವೂ ಸಹಜವಾಗಿದ್ದರೂ, ಕಳೆದ ಕೆಲವು ವರ್ಷಗಳಿಂದ ಮಧು ಪತ್ನಿ ಮೇಲೆ ಅನುಮಾನ ಪಟ್ಟು ನಿರಂತರ ಜಗಳವಾಡುತ್ತಿದ್ದನೆಂದು ತಿಳಿದುಬಂದಿದೆ.
ಕುಟುಂಬಸ್ಥರು ಹಲವಾರು ಬಾರಿ ರಾಜಿ ಪಂಚಾಯ್ತಿ ನಡೆಸಿ ದಂಪತಿಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು. ಆದರೆ ಮಧು ವರದಕ್ಷಿಣೆ ಹಣ ತರುವಂತೆ ಚನ್ನಮ್ಮನಿಗೆ ಕಿರುಕುಳ ನೀಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚನ್ನಮ್ಮಳ ಪೋಷಕರು ಆತನಿಗೆ ಆಟೋ ವಾಹನ ಕೊಡಿಸಿದ್ದರೂ ಕಿರುಕುಳ ನಿಲ್ಲಲಿಲ್ಲ ಎನ್ನಲಾಗಿದೆ.
ಫೆ. 18ರಂದು ಚನ್ನಮ್ಮಳ ಮೇಲೆ ಮಧು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಚನ್ನಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.