Hassan | ಪಾಲಿಕೆ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ; 6.82 ಕೋಟಿ ರೂ.ಮೌಲ್ಯದ ಆಸ್ತಿ ಪತ್ತೆ
ಹಾಸನ : ಹಾಸನ ಮಹಾನಗರ ಪಾಲಿಕೆಯ ಇಂಜಿನಿಯರ್ ಸತ್ಯನಾರಾಯಣ ಅವರ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಮಾರು 6 ಕೋಟಿ 82 ಲಕ್ಷ 54 ಸಾವಿರ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಗುರುವಾರ ಬೆಳಗ್ಗೆಯಿಂದ ಆರಂಭವಾದ ಶೋಧ ಕಾರ್ಯವು ಸುಮಾರು 12 ಗಂಟೆಗಳ ಕಾಲ ಮುಂದುವರಿದಿದ್ದು, ಅಧಿಕಾರಿಗಳು ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇನ್ನು ಕೂಡ ಪರಿಶೀಲನೆ ಮುಂದುವರಿದಿದೆ.
ಪಾಲಿಕೆ ಇಂಜಿನಿಯರ್ ಸತ್ಯನಾರಾಯಣ ಅವರಿಗೆ ಸಂಬಂಧಿಸಿದಂತೆ 7 ಕಡೆಗಳಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಪ್ರಾಥಮಿಕ ತನಿಖೆಯಲ್ಲಿ ಅವರ ಆದಾಯಕ್ಕಿಂತ ಶೇಕಡಾ 200.74ರಷ್ಟು ಹೆಚ್ಚುವರಿ ಆಸ್ತಿ ಹೊಂದಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ದಾಳಿಯ ವೇಳೆ 52 ಲಕ್ಷ ರೂ.ಮೌಲ್ಯದ 7 ನಿವೇಶನಗಳು, 5 ಕೋಟಿ 30 ಲಕ್ಷ ರೂ.ಮೌಲ್ಯದ ಮೂರು ಮನೆಗಳು ಹಾಗೂ 3 ಎಕರೆ 33 ಗುಂಟೆ ಕೃಷಿ ಜಮೀನು ಸೇರಿದಂತೆ ಒಟ್ಟು 5 ಕೋಟಿ 98 ಲಕ್ಷ 35 ಸಾವಿರ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. ಜೊತೆಗೆ 1 ಕೆಜಿ 36 ಗ್ರಾಂ ಚಿನ್ನ (ಸುಮಾರು 90 ಲಕ್ಷ 75 ಸಾವಿರ ರೂ.ಮೌಲ್ಯ) ಹಾಗೂ 11 ಕೆಜಿ 208 ಗ್ರಾಂ ಬೆಳ್ಳಿ ಆಭರಣಗಳು (18 ಲಕ್ಷ 22 ಸಾವಿರ ರೂ.ಮೌಲ್ಯ) ಕೂಡ ಪತ್ತೆಯಾಗಿವೆ.
ಇದರೊಂದಿಗೆ 15 ಲಕ್ಷ ರೂ.ನಗದು, 22 ಲಕ್ಷ ರೂ.ಮೌಲ್ಯದ ಎರಡು ಕಾರುಗಳು ಸೇರಿ ಒಟ್ಟು 1 ಕೋಟಿ 46 ಲಕ್ಷ 73 ಸಾವಿರ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಹೆಚ್ಚುವರಿಯಾಗಿ ಸುಮಾರು 25 ಲಕ್ಷ ರೂ.ಮೌಲ್ಯದ ಇತರ ಆಸ್ತಿಗಳು ಹಾಗೂ ಎರಡು ಲಾಕರ್‌ಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಹಾಸನದ ರಕ್ಷಣಾಪುರಂನಲ್ಲಿರುವ ಮನೆ ಮೇಲೆ ದಾಳಿ ಆರಂಭವಾದಾಗ ಸತ್ಯನಾರಾಯಣ ಅವರು ಸುಮಾರು ಮೂರುವರೆ ಗಂಟೆಗಳ ಕಾಲ ಮನೆ ಬಾಗಿಲು ತೆರೆಯದೇ ಅಧಿಕಾರಿಗಳನ್ನು ಕಾಯಿಸಿಟ್ಟಿದ್ದರೆಂಬ ಮಾಹಿತಿ ದೊರೆತಿದೆ. ನಂತರ ಅಧಿಕಾರಿಗಳು ಮನೆಯ ಒಳಗೆ ಪ್ರವೇಶಿಸಿ ಶೋಧನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.