ಹಾಸನ | ಲೋಕಾಯುಕ್ತ ದಾಳಿ: ಮನೆ ಬಾಗಿಲು ತೆರೆಯದೆ ನಾಲ್ಕು ಗಂಟೆ ಸತಾಯಿಸಿದ ಮನಪಾ ಎಇಇ!
ಬಾಗಿಲು ತೆರೆಯುವಂತೆ ಮಾಡಿದ ನಿರಂತರ ಮನವಿಗೆ ಸ್ಪಂದಿಸದ ಅಧಿಕಾರಿ
ಹಾಸನ: ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ (ಎಇಇ) ಎಂ.ಸಿ. ಸತ್ಯನಾರಾಯಣ ಅವರ ನಿವಾಸದ ಮೇಲೆ ಗುರುವಾರ ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದೆ. ಈ ವೇಳೆ ಸತ್ಯನಾರಾಯಣ ಸುಮಾರು ನಾಲ್ಕು ಗಂಟೆಗಳ ಕಾಲ ಮನೆ ಬಾಗಿಲು ತೆರೆಯದೆ ಲೋಕಾಯುಕ್ತ ಅಧಿಕಾರಿಗಳನ್ನು ಸತಾಯಿಸಿದ ಘಟನೆ ನಡೆದಿದೆ.
ಮುಂಜಾವ 5 ಗಂಟೆ ಸುಮಾರಿಗೆ ದಾಳಿಗೆ ತೆರಳಿದ್ದ ಲೋಕಾಯುಕ್ತ ಅಧಿಕಾರಿಗಳು ಬಾಗಿಲು ತೆರೆಯುವಂತೆ ಎಇಇ ಎಂ.ಸಿ. ಸತ್ಯನಾರಾಯಣರಿಗೆ ಹಲವು ಬಾರಿ ಸೂಚಿಸಿದರೂ ಒಳಗಿನಿಂದ ಸ್ಪಂದನ ವ್ಯಕ್ತವಾಗಲಿಲ್ಲ. ಇದರಿಂದ ಅಧಿಕಾರಿಗಳು ಮನೆ ಮುಂಭಾಗದಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಸ್ಥಳಕ್ಕೆ ಭೇಟಿ ನೀಡಿ ಮನೆಯ ಸುತ್ತಮುತ್ತ ಪರಿಶೀಲಿಸಿದರು. ಅಲ್ಲಿದ್ದ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಮುಂದಿನ ಕ್ರಮಗಳ ಕುರಿತು ಸೂಚನೆ ನೀಡಿ ಸ್ಥಳದಿಂದ ತೆರಳಿದರು. ಮನೆಯ ಬಾಗಿಲು ತೆರೆಯುವಂತೆ ಲೋಕಾಯುಕ್ತ ಅಧಿಕಾರಿಗಳು ಹಲವಾರು ಬಾರಿ ಪ್ರಯತ್ನಿಸಿದರೂ ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಹೊರಭಾಗದಲ್ಲಿದ್ದ ಸಿಸಿಟಿವಿ ಕ್ಯಾಮರಾ ಎದುರು ನಿಂತು ತಕ್ಷಣವೇ ಬಾಗಿಲು ತೆರೆಯುವಂತೆ ಸೂಚನೆ ನೀಡಿದರು. ಈ ನಡುವೆ ಸತ್ಯನಾರಾಯಣರ ಸಂಬಂಧಿ ಮಹಿಳೆಯೊಬ್ಬರು ಸ್ಥಳಕ್ಕೆ ಬಂದು ಬಾಗಿಲು ತಟ್ಟುತ್ತಾ ಒಳಗಿರುವವರನ್ನು ಕೂಗಿ ಕರೆದರೂ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ. ನಂತರ ಅಧಿಕಾರಿಗಳು ಮನೆಯ ಕಾರ್ ಶೆಡ್ ಬಾಗಿಲು ತೆರೆಯಲು ಪ್ರಯತ್ನಸಿದರೂ ಅದು ಸಾಧ್ಯವಾಗಲಿಲ್ಲ. ಬಳಿಕ ಮನೆಯೊಳಗೆ ಪ್ರವೇಶಿಸಲು ಅಧಿಕಾರಿಗಳು ವಾಹನದ ಮೇಲೆ ಹತ್ತಿ ಬಾಲ್ಕನಿ ಮೂಲಕ ಒಳನುಗ್ಗಲು ಪ್ರಯತ್ನಿಸಿದರು. ಅದು ಫಲ ನೀಡಲಿಲ್ಲ.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಬ್ಲೂಟೂತ್ ಸ್ಪೀಕರ್ ತರಿಸಿ ಮೈಕ್ ಮೂಲಕ ಒಳಗಿರುವವರಿಗೆ ಸೂಚನೆ ನೀಡಲು ಸಿದ್ಧತೆ ನಡೆಸಿದರು. ಈ ಮಧ್ಯೆ ಕೊನೆಗೂ ಸತ್ಯನಾರಾಯಣ ಕುಟುಂಬದವರು ಮನೆ ಬಾಗಿಲು ತೆರೆದರು. ಅಷ್ಟರಲ್ಲಿ ನಾಲ್ಕು ಗಂಟೆ ಸಮಯ ಕಳೆದಿತ್ತು.
ಬಾಗಿಲು ತೆರೆಯುತ್ತಿದ್ದಂತೆಯೇ ಲೋಕಾಯುಕ್ತ ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸಿ ದಾಖಲೆಗಳು ಹಾಗೂ ಆಸ್ತಿಪಾಸ್ತಿಗಳ ಕುರಿತು ಪರಿಶೀಲನೆ ಆರಂಭಿಸಿದರು. ದಾಳಿ ವೇಳೆ ಹಲವು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ.
ನಾಲ್ಕು ಗಂಟೆಗಳ ಕಾಲ ಬಾಗಿಲು ತೆರೆಯದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.