Sakleshpura | ಬಾಲಕನನ್ನು ಜೀತಕ್ಕೆ ಇಟ್ಟುಕೊಂಡಿದ್ದ ಆರೋಪ; ಶ್ರೀರಾಮಸೇನೆಯ ಜಾನೆಕೆರೆ ಹೇಮಂತ್ ವಿರುದ್ದ ಪ್ರಕರಣ ದಾಖಲು
ಸಕಲೇಶಪುರ : ಅಪ್ರಾಪ್ತ ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿ ಸುಮಾರು ಎರಡು ತಿಂಗಳ ಕಾಲ ಜೀತ ಮಾಡಿಸಿಕೊಂಡ ಆರೋಪದ ಮೇಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಾಸನ ತಾಲ್ಲೂಕಿನ ಸಂತ್ರಸ್ತ ಬಾಲಕ ನೀಡಿದ ದೂರಿನ ಮೇರೆಗೆ ಜಾನೆಕೆರೆ ಗ್ರಾಮದ ಶ್ರೀರಾಮಸೇನೆಯ ರಾಜ್ಯ ಸಹ ಕಾರ್ಯದರ್ಶಿ ಹೇಮಂತ್ ಕುಮಾರ್ (A1) ಮತ್ತು ಅವರ ತಾಯಿ ಮಾದಮ್ಮ (A2) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) 127, 137(2), 352 ಸೆಕ್ಷನ್‌ಗಳು ಹಾಗೂ ಮಕ್ಕಳ ಕಾರ್ಮಿಕ ಕಾಯ್ದೆ 14ನೇ ವಿಧಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ವಿವರ:
ಬಾಲಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. ಜನವರಿ 6ರಂದು ಶಾಲೆಯಿಂದ ಹೊರಬಂದ ಬಳಿಕ ಹಾಸನ ಹೊಸ ಬಸ್ ನಿಲ್ದಾಣದಲ್ಲಿ ತನ್ನ ಊರಿಗೆ ಹೋಗಲು ಬಸ್ ಕಾಯುತ್ತಿದ್ದಾಗ, ಅಲ್ಲಿಗೆ ಬಂದ ಹೇಮಂತ್ ಎಂಬ ವ್ಯಕ್ತಿ ಮಾತನಾಡಿಸಿ ತನ್ನ ಕಾಫಿ ತೋಟದಲ್ಲಿ ಕೆಲಸ ನೀಡುವುದಾಗಿ ಹೇಳಿ ಬಾಲಕನನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಜಾನೆಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಬಾಲಕನನ್ನು ಇರಿಸಿಕೊಂಡು ದನಗಳಿಗೆ ಆಹಾರ ಹಾಕುವುದು, ಸಗಣಿ ಸ್ವಚ್ಛಗೊಳಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ತೋಟದಲ್ಲಿ ಪೈಪ್ ಜೋಡಿಸುವ ಕೆಲಸ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಸುತ್ತಿದ್ದು, ಕೆಲಸ ಮಾಡದಿದ್ದರೆ ಹೇಮಂತ್ ಮತ್ತು ಅವರ ತಾಯಿ ಮಾದಮ್ಮ ಬೈಯುತ್ತಿದ್ದರು ಎಂದು ಬಾಲಕ ಹೇಳಿಕೆಯಲ್ಲಿ ಆರೋಪಿಸಿದ್ದಾನೆ.
ಸುಮಾರು ಎರಡು ತಿಂಗಳ ಕಾಲ ಬಾಲಕನನ್ನು ಹೊರಗೆ ಹೋಗದಂತೆ ಇಟ್ಟುಕೊಂಡು ಕೆಲಸ ಮಾಡಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಾರ್ಚ್ 4ರಂದು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಒಡನಾಡಿ ಸಂಸ್ಥೆ ಅಧಿಕಾರಿಗಳು ಜಾನೆಕೆರೆ ಗ್ರಾಮದಲ್ಲಿರುವ ಹೇಮಂತ್ ಅವರ ಮನೆಯಿಂದ ಬಾಲಕನನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹೇಮಂತ್ ನನ್ನು ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.