Sakleshpura | ಬಾಲಕನನ್ನು ಜೀತಕ್ಕೆ ಇಟ್ಟುಕೊಂಡಿದ್ದ ಆರೋಪ; ಶ್ರೀರಾಮಸೇನೆ ರಾಜ್ಯ ಸಹ ಕಾರ್ಯದರ್ಶಿ ವಿರುದ್ಧ ದೂರು
ಜಾನೆಕೆರೆ ಹೇಮಂತ್
ಸಕಲೇಶಪುರ : ತಾಲ್ಲೂಕಿನ ಜಾನೆಕೆರೆ ಗ್ರಾಮದಲ್ಲಿ ಬಾಲಕನನ್ನು ಜೀತಕ್ಕೆ ಇಟ್ಟುಕೊಂಡಿದ್ದ ಆರೋಪದ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಹಾಸನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಶ್ರೀರಾಮಸೇನೆ ರಾಜ್ಯ ಸಹ ಕಾರ್ಯದರ್ಶಿ ಜಾನೆಕೆರೆ ಹೇಮಂತ್ ರಿಂದ ಬಾಲಕನನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹಾಸನ ತಾಲ್ಲೂಕು ಮೂಲದ 13 ವರ್ಷದ ಬಾಲಕನನ್ನು ವಿದ್ಯಾಭ್ಯಾಸ ನೀಡುವುದಾಗಿ ನಂಬಿಸಿ ಕರೆದೊಯ್ದಿದ್ದ ಶ್ರೀರಾಮಸೇನೆ ರಾಜ್ಯ ಸಹ ಕಾರ್ಯದರ್ಶಿ ಜಾನೆಕೆರೆ ಹೇಮಂತ್, ಬಳಿಕ ತನ್ನ ಕಾಫಿ ತೋಟದಲ್ಲಿ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಂದೆ ಸಾವನ್ನಪ್ಪಿದ್ದು, ತಾಯಿಗೆ ಅನಾರೋಗ್ಯ ಇರುವ ಹಿನ್ನೆಲೆ ಕೆಲಸ ಹುಡುಕಿಕೊಂಡು ಬಂದಿದ್ದ ಬಾಲಕನನ್ನು ಹೆದರಿಸಿ ಜೀತಕ್ಕೆ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕನನ್ನು ಪ್ರತ್ಯೇಕ ಜಾಗದಲ್ಲಿ ಇರಿಸಿ, ತೋಟದ ಕೆಲಸ ಮಾಡಿಸುತ್ತಿದ್ದ ವಿಚಾರ ಅಪರಿಚಿತರ ಮೂಲಕ ಮೈಸೂರಿನ ‘ಒಡನಾಡಿ’ ಸಂಸ್ಥೆಗೆ ತಿಳಿದುಬಂದಿತ್ತು. ಈ ಕುರಿತು ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ಕೆ.ವಿ.ಸ್ಟಾನ್ಲಿ ಮತ್ತು ನಿರ್ದೇಶಕ ಪರಶುರಾಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಾಹಿತಿ ಆಧರಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಿಲೀಪ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಜಾನೆಕೆರೆ ಗ್ರಾಮದ ಕಾಫಿ ತೋಟದಲ್ಲಿ ಜೀತಕ್ಕಿದ್ದ ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ ಬಾಲಕನನ್ನು ಹಾಸನದ ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ಈ ಪ್ರಕರಣ ಸಂಬಂಧ ಶ್ರೀರಾಮಸೇನೆ ರಾಜ್ಯ ಸಹಕಾರ್ಯದರ್ಶಿ ಹೇಮಂತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪ್ರಕ್ರಿಯೆ ನಡೆಯುತ್ತಿದೆ.