Hassan | ನಿಧಾನವಾಗಿ ಕಾರು ಚಲಾಯಿಸುವಂತೆ ಸೂಚಿಸಿದ್ದಕ್ಕೆ ವ್ಯಕ್ತಿಯ ಹತ್ಯೆ
ಸಾಂದರ್ಭಿಕ ಚಿತ್ರ | PC : freepik
ಹಾಸನ : ಅತೀವೇಗದಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ‘‘ನಿಧಾನವಾಗಿ ಹೋಗು’’ ಎಂದು ಹೇಳಿದ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಕಾರನ್ನು ಹಿಂದಿರುಗಿಸಿ ನೇರವಾಗಿ ಯುವಕರ ಮೇಲೆ ಗುದ್ದಿದ ಪರಿಣಾಮ 27 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ಮೃತ ಯುವಕನನ್ನು ಮನು ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಸೋಮವಾರ ರಾತ್ರಿ ಮನು, ಅಭಿಷೇಕ್ ಸೇರಿದಂತೆ ಇನ್ನಿಬ್ಬರು ಯುವಕರು ಗ್ರಾಮದಲ್ಲಿ ರಸ್ತೆಬದಿಯಲ್ಲಿ ಮಾತನಾಡುತ್ತ ನಿಂತಿದ್ದರು. ಇದೇ ವೇಳೆ ವೇಗವಾಗಿ ಬರುತ್ತಿದ್ದ ಕಾರನ್ನು ಗಮನಿಸಿದ ಮನು ಹಾಗೂ ಅಭಿಷೇಕ್ ಚಾಲಕನಿಗೆ ನಿಧಾನವಾಗಿ ಸಾಗುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಚಾಲಕ ಸ್ವಲ್ಪ ದೂರ ಹೋಗಿ, ಬಳಿಕ ಕಾರನ್ನು ತಿರುಗಿಸಿಕೊಂಡು ಬಂದು ಮಾತನಾಡುತ್ತಿದ್ದ ಯುವಕರ ಮೇಲೆ ಉದ್ದೇಶಪೂರ್ವಕವಾಗಿ ಗುದ್ದಿದನೆಂದು ತಿಳಿದುಬಂದಿದೆ.
ಢಿಕ್ಕಿಯ ತೀವ್ರತೆಗೆ ಮನು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ಗಾಯಗೊಂಡಿದ್ದು, ಇವರಲ್ಲಿ ಅಭಿಷೇಕ್ ಮತ್ತು ರಾಕೇಶ್ ಅವರಿಗೆ ಗಂಭೀರ ಗಾಯಗಳಾಗಿವೆ.
ಕುಶಾಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಳಿಕ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತೀವ್ರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.