ದ್ವೇಷ ರಾಜಕೀಯದ ವಿರುದ್ಧ ಮಹಿಳಾ ಚಳವಳಿ ಬಲಗೊಳ್ಳಲಿ: ತೀಸ್ತಾ ಸೆಟಲ್ವಾಡ್
ಹಾಸನ: ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ ರಾಜಕೀಯ ಹಾಗೂ ದೌರ್ಜನ್ಯಗಳ ವಿರುದ್ಧ ಮಹಿಳಾ ಚಳವಳಿಗಳು ಇನ್ನಷ್ಟು ಬಲವಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಕರೆ ನೀಡಿದ್ದಾರೆ.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಮಹಿಳಾ ಚಳವಳಿಗಳು ಹಲವು ಸವಾಲುಗಳನ್ನು ಎದುರಿಸುತ್ತಾ ಮುಂದುವರಿಯುತ್ತಿವೆ. ಜಾತಿಯ ಹೆಸರಿನಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವುದು ಹಾಗೂ ಮುಸ್ಲಿಮ್ ಮಹಿಳೆಯರ ವಿರುದ್ಧ ಅವಮಾನಕಾರಿ ನಡೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಮೇಲೂ ದಾಳಿಗಳು ಹೆಚ್ಚುತ್ತಿರುವುದಾಗಿ ಅವರು ಉಲ್ಲೇಖಿಸಿದರು. ಜಾಗತಿಕ ಮಟ್ಟದಲ್ಲಿಯೂ ಯುದ್ಧ ಹಾಗೂ ಸಾಮ್ರಾಜ್ಯಶಾಹಿ ರಾಜಕೀಯದ ಪರಿಣಾಮವಾಗಿ ಸಾಮಾನ್ಯ ಜನರು, ವಿಶೇಷವಾಗಿ ಮಕ್ಕಳು ಬಲಿಯಾಗುತ್ತಿರುವುದು ದುಃಖಕರ ಸಂಗತಿ ಎಂದು ಹೇಳಿದರು.
ರಮಝಾನ್ ಸಂದರ್ಭದಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬನ ಹತ್ಯೆ ನಡೆದಿರುವ ಘಟನೆ ಉಲ್ಲೇಖಿಸಿದ ಅವರು, ಇಂತಹ ದ್ವೇಷಪರ ಘಟನೆಗಳ ವಿರುದ್ಧ ಮಹಿಳಾ ಚಳವಳಿಗಳು ದೃಢವಾಗಿ ಹೋರಾಟ ಕಟ್ಟಬೇಕು ಎಂದು ಕರೆ ನೀಡಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಸ್ವತಂತ್ರವಾಗಿ ದುಡಿಯಲು ಹಾಗೂ ಪ್ರಶ್ನಿಸಲು ಮಹಾತ್ಮಾ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ ಮೆಂಟ್ ಗ್ಯಾರಂಟಿ ಆಕ್ಟ್ ಯೋಜನೆ ಮಾನಸಿಕ ಬಲ ನೀಡಿತ್ತು. ಆದರೆ ಈಗ ವಿವಿಧ ಕಾರಣಗಳಿಂದ ಈ ಯೋಜನೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಸಬಿತಾ ಬನ್ನಾಡಿ, ಅನುಪಮ ಮಾತನಾಡಿದರು. ತೀಸ್ತಾ ಸೆಟಲ್ವಾಡ್ ಅವರಿಗೆ ಕೌದಿ ಹೊದಿಸಿ ಗೌರವಿಸಲಾಯಿತು. ಸಮಾವೇಶಕ್ಕೂ ಮುನ್ನ ಹಾಸನ ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಮಹಿಳೆಯರು ಮೆರವಣಿಗೆ ನಡೆಸಿ ಕೋಲಾಟ ಹಾಗೂ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು. ಇದೇ ವೇಳೆ ‘ಹಾಸನ ಮಣ್ಣಿನ ಹೆಣ್ಣು ಧ್ವನಿಗಳು’ ಎಂಬ ಪುಸ್ತಕವೂ ಬಿಡುಗಡೆಗೊಂಡಿತು.
ಸಮಾವೇಶದ ಅಧ್ಯಕ್ಷತೆಯನ್ನು ಸಾಹಿತಿ ರೂಪ ಹಾಸನ್ ವಹಿಸಿದ್ದರು. ವೇದಿಕೆಯಲ್ಲಿ ಮಮತಾ ನಿರಂಜನ, ಬಾ.ಹ. ರಮಾ, ಅರ್ಚನಾ ಜಯಂತ್, ಪ್ರಭಾವತಿ ದೇಸಾಯಿ, ಸುಜಾತ ಕುಮಾರಸ್ವಾಮಿ, ಶಾನು ಸುಹಾನ ಸಹಿ ಅನೇಕ ಮಹಿಳಾ ನಾಯಕಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಡಾ.ಶಬಾನ ಮೈಸೂರು ಮತ್ತು ಕೆ.ಬಿ.ಮನು ನಿರ್ವಹಿಸಿದರು.
ಮಾಧ್ಯಮಗಳ ಕಾರ್ಪೊರೇಟೀಕರಣದಿಂದ ಅಲ್ಪಸಂಖ್ಯಾತರ ಪ್ರಶ್ನೆಗಳು ಹಿಮ್ಮೆಟ್ಟುತ್ತಿವೆ ಎಂದು ಆರೋಪಿಸಿದ ಅವರು, ಕೆಲವು ಮಾಧ್ಯಮಗಳು ಮುಸ್ಲಿಮ್ ಮಹಿಳೆಯರನ್ನು ತಪ್ಪಾಗಿ ಚಿತ್ರಿಸುವ ಮೂಲಕ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿವೆ. ದಾಖಲೆಗಳ ಹೆಸರಿನಲ್ಲಿ ದಲಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
-ತೀಸ್ತಾ ಸೆಟಲ್ವಾಡ್, ನಾಗರಿಕ ಹಕ್ಕುಗಳ ಹೋರಾಟಗಾರ್ತಿ