ECG ನಾರ್ಮಲ್ ಇದ್ದ ಮಾತ್ರಕ್ಕೆ ಹೃದಯ ಸೇಫ್ ಆಗಿದೆಯೆ? ವೈದ್ಯರು ಹೇಳುವುದೇನು?
ಸಾಂದರ್ಭಿಕ ಚಿತ್ರ | Photo Credit : freepik
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಹಿರಿಯ ಹೃದ್ರೋಗ ತಜ್ಞರಾದ ಡಾ ಶ್ರೀವತ್ಸ್ ನಾಡಿಗ್ ಇಸಿಜಿ ಬಗ್ಗೆ ಹೇಳುವುದೇನು?
ಇಸಿಜಿ ನಾರ್ಮಲ್ ಆಗಿದ್ದರೆ ಹೃದಯ ನಾರ್ಮಲ್ ಆಗಿರುತ್ತದೆಯೆ ಎನ್ನುವ ಪ್ರಶ್ನೆ ಬಹಳಷ್ಟು ಮಂದಿಯಲ್ಲಿರುತ್ತದೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಹಿರಿಯ ಹೃದ್ರೋಗ ತಜ್ಞರಾದ ಡಾ ಶ್ರೀವತ್ಸ್ ನಾಡಿಗ್ ಈ ಬಗ್ಗೆ ಎಕ್ಸ್ ನಲ್ಲಿ ಸಂಶಯ ನಿವಾರಿಸಿದ್ದಾರೆ.
ಶ್ರೀವತ್ಸ ನಾಡಿಗ್ ಹೇಳುವ ಪ್ರಕಾರ, “ಅನೇಕ ರೋಗಿಗಳು ನನ್ನ ಬಳಿ ಕೇಳುವ ಪ್ರಶ್ನೆ ಏನೆಂದರೆ, ಇಸಿಜಿ ನಾರ್ಮಲ್ ಇದ್ದರೆ ಹೃದಯ ನಾರ್ಮಲ್ ಇದೆ ಎಂದು ಅರ್ಥವೆ? ಹೃದಯಾಘಾತವಾಗಿ ಬಂದ ರೋಗಿಗಳು ಹೇಳುವ ಪ್ರಕಾರ ಒಂದು ತಿಂಗಳ ಕೆಳಗೆಯಷ್ಟೇ ಇಸಿಜಿ ಮಾಡಿಸಿಕೊಂಡಿದ್ದೆ. ಹೃದಯ ನಾರ್ಮಲ್ ಆಗಿತ್ತು. ಈಗ ಹೃದಯಾಘಾತ ಎಂದು ಹೇಳುತ್ತಿದ್ದೀರಿ. ಯಾವುದನ್ನು ನಂಬಲಿ ಎನ್ನುವ ಪ್ರಶ್ನೆ ರೋಗಿಗಳಲ್ಲಿ ಇರುತ್ತದೆ.”
ಇಸಿಜಿ ಎಂದರೇನು?
ಶ್ರೀವತ್ಸ್ ನಾಡಿಗ್ ಅವರ ಪ್ರಕಾರ, ಇಸಿಜಿ ಎಂದರೆ ಎಲೆಕ್ಟ್ರೋಕಾರ್ಡಿಯೋ ಗ್ರಾಮ್. ಇಸಿಜಿ ಅಂದರೆ ಹೃದಯದ ಎಲೆಕ್ಟ್ರಿಕಲ್ ಚಟುವಟಿಕೆ ಅಥವಾ ಹೃದಯದಲ್ಲಿ ಹರಿದು ಹೋಗುವ ವಿದ್ಯುತ್ ಅನ್ನು ತೋರಿಸುವಂತಹ ಪರೀಕ್ಷೆಯಾಗಿರುತ್ತದೆ. ಇಸಿಜಿ ಮಾಡಿದಾಗ ಹೃದಯದ ರಕ್ತ ಸಂಚಾರ ಚೆನ್ನಾಗಿದೆಯೆ? ಹೃದಯದ ಸ್ನಾಯುಗಳು ಚೆನ್ನಾಗಿವೆಯೆ? ಹೃದಯದ ಕವಾಟಗಳು ಚೆನ್ನಾಗಿ ಕೆಲಸ ಮಾಡುತ್ತಿವೆಯೆ? ಹೃದಯ ಬಡಿತದ ಕರೆಂಟ್ನ ವೈರ್ಗಳು ಹೇಗೆ ಕೆಲಸ ಮಾಡುತ್ತವೆ? ಎನ್ನುವುದನ್ನು ತೋರಿಸುತ್ತದೆ.
ಇಸಿಜಿ ನಾರ್ಮಲ್ ಬಂದರೆ ಸಾಕೆ?
ಆದರೆ ನಾರ್ಮಲ್ ಇಸಿಜಿ ಬಂದ ಮಾತ್ರಕ್ಕೆ ಯಾವುದೇ ತೊಂದರೆಗಳಿಲ್ಲ ಎಂದು ಅರ್ಥವಲ್ಲ. ಹಾಗೆ ಹೇಳುವುದು ಕಷ್ಟ. ಮುಖ್ಯವಾಗಿ ಹೃದಯದ ರಕ್ತನಾಳದ ಬ್ಲಾಕೇಜ್ ಅನ್ನು ಪತ್ತೆ ಹಚ್ಚಲು ಇಸಿಜಿ ಎಷ್ಟರಮಟ್ಟಿಗೆ ಸೆನ್ಸಿಟಿವ್ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಹೃದಯದ ರಕ್ತನಾಳದಲ್ಲಿ ಶೇ 50-60 ರಷ್ಟು ಬ್ಲಾಕೇಜ್ ಇರುವಾಗ ಹೃದಯದ ವಿದ್ಯುತ್ ಚಟುವಟಿಕೆ ಅಥವಾ ಪಂಪಿಂಗ್ಗೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಶೇ 80ರಷ್ಟು ಬ್ಲಾಕೇಜ್ ಇರುವಾಗಲೂ ಇಸಿಜಿಯಲ್ಲಿ ತೊಂದರೆಗಳು ಕಂಡುಬರುವುದಿಲ್ಲ. ಹೀಗಾಗಿ ನಾರ್ಮಲ್ ಇಸಿಜಿ ಎಂದಾಕ್ಷಣ ಎಲ್ಲಾ ನಾರ್ಮಲ್ ಎಂದು ಅರ್ಥವಲ್ಲ.
ಸೀರಿಯಲ್ ಇಸಿಜಿ ಮಾಡುವುದೇಕೆ?
ಫುಲ್ ಕ್ಲೋಸ್ ಆಗಿ ಹೃದಯಾಘಾತ ಆದರೂ ಸಹ ಇಸಿಜಿ ನಾರ್ಮಲ್ ಆಗಿಬರಬಹುದು. ನೂರರಲ್ಲಿ 30 ಮಂದಿ ಜನರಿಗೆ ಇಂತಹ ಸಂದರ್ಭದಲ್ಲಿ ಇಸಿಜಿ ನಾರ್ಮಲ್ ಆಗಿ ಇರಬಹುದು. ಅದೇ ಕಾರಣಕ್ಕೆ ಸೀರಿಯಲ್ ಇಸಿಜಿ ಅಥವಾ ಅರ್ಧಗಂಟೆಗೊಮ್ಮೆ ಇಸಿಜಿಯನ್ನು ಸಲಹೆ ನೀಡಲಾಗುತ್ತದೆ. ಕಳೆದ ತಿಂಗಳು, ಅರ್ಧ ವರ್ಷದ ಹಿಂದೆ ಅಥವಾ ವರ್ಷದ ಹಿಂದೆ ಇಸಿಜಿ ಸಾಮಾನ್ಯ ಇದ್ದ ಮಾತ್ರಕ್ಕೆ ಈಗ ಹೃದಯಾಘಾತ ಆಗಿದೆ ಎಂದು ವೈದ್ಯರು ಹೇಳಿದರೆ ಅದನ್ನು ಅಲಕ್ಷಿಸಬೇಡಿ.
ಇಸಿಜಿ ಹೊರತಾದ ಪರೀಕ್ಷೆಗಳು ಯಾವುವು?
“ಇಸಿಜಿ ಅತಿಮುಖ್ಯ ಪರೀಕ್ಷೆ. ಆದರೆ ಅದು ಎಲ್ಲಾ ತೊಂದರೆಗಳನ್ನು ಪರಿಶೀಲಿಸುವ ಶಕ್ತಿ ಇರುವುದಿಲ್ಲ. ಹೀಗಾಗಿ ನಾವು ರೋಗಿಗಳಲ್ಲಿ ತೊಂದರೆ ಕಂಡುಬಂದಲ್ಲಿ ಎಕೋ ಟ್ರೆಡ್ ಮಿಲ್ ಟೆಸ್ಟ್ (ಟಿಎಂಟಿ), ರಕ್ತ ಪರೀಕ್ಷೆಗಳು, ಟ್ರೊಪಿನಿನ್ ಅಥವಾ ಲಿಪಿಡ್ ಪ್ರೊಫೈಲ್ನಂತಹ ಪರೀಕ್ಷೆಗಳು, ಸಿಟಿ ಸ್ಕ್ಯಾನ್ ಆಂಜಿಯೋಗ್ರಾಂ ಎನ್ನುವ ಪರೀಕ್ಷೆಯನ್ನೂ ಮಾಡುತ್ತೇವೆ. ತೊಂದರೆಗಳು ಕಂಡುಬಂದಲ್ಲಿ ಆಂಜಿಯೋಗ್ರಾಂ ಪರೀಕ್ಷೆ ಸೂಚಿಸುತ್ತೇವೆ. ಎಲ್ಲಾ ಹೃದಯದ ತೊಂದರೆಗಳಿಗೆ ಬೇರೆ ರೀತಿಯ ಪರೀಕ್ಷೆಗಳಿವೆ. ಇಸಿಜಿ ನಾರ್ಮಲ್ ಬಂದ ಮಾತ್ರಕ್ಕೆ ಹೃದಯ ನಾರ್ಮಲ್ ಆಗಿದೆ ಎನ್ನುವುದು ತಪ್ಪು ತಿಳುವಳಿಕೆ. ಅದು ಒಂದು ಬಹಳ ಬೇಸಿಕ್ ಪರೀಕ್ಷೆಯಷ್ಟೆ” ಎನ್ನುತ್ತಾರೆ ವೈದ್ಯರು.