×
Ad

ಹೊಸದಿಲ್ಲಿ: ಹೋಟೆಲ್ ಮಾಲೀಕ, ಪುಟ್ಟ ಮಗನನ್ನು ಇರಿದು ಹತ್ಯೆ

Update: 2023-10-22 07:38 IST

ಹೊಸದಿಲ್ಲಿ: ಸುಮಾರು 30 ವರ್ಷ ವಯಸ್ಸಿನ ಹೋಟೆಲ್ ಮಾಲೀಕ ಹಾಗೂ ಆತನ ಎಂಟು ವರ್ಷದ ಮಗ ನಿದ್ದೆಯಲ್ಲಿದ್ದಾಗ ಅವರ ಮನೆಯಲ್ಲೇ ಇರಿದು ಹತ್ಯೆ ಮಾಡಿದ ಪ್ರಕರಣ ಕೇಂದ್ರ ದೆಹಲಿಯ ಪಹರ್ಗಂಜ್ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಅನೂಜ್ ಸಿಂಗ್ ಮತ್ತು ಆತನ ಮಗ ರಾಣಕ್ ಎಂದು ಗುರುತಿಸಲಾಗಿದೆ. ಹೋಟೆಲ್ ಮಾಲೀಕನ ಮೊಬೈಲ್ ಗೆ ಪದೇ ಪದೇ ಪತ್ನಿ ಹಾಗೂ ಪುತ್ರಿ ಕರೆ ಮಾಡಿದರೂ, ಪ್ರತಿಕ್ರಿಯೆ ಬಾರದಾಗ ಸಂಶಯಗೊಂಡು ಮನೆಗೆ ಬಂದು ನೋಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಭೀಕರ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ. 

"ಅನೂಜ್ ವಾಸವಿದ್ದ ಮನೆಯ ಮೊದಲ ಮಹಡಿಯಲ್ಲಿ ಮೃತದೇಹಗಳು ಸಿಕ್ಕಿವೆ. ಅನೂಜ್ ಅವರ ಕುತ್ತಿಗೆಯಲ್ಲಿ ಆಳವಾದ ಇರಿತದ ಗಾಯಗಳಿದ್ದು, ದೇಹದ ಎಲ್ಲೆಡೆ ಇರಿತದ ಗಾಯಗಳು ಕಂಡುಬಂದಿವೆ. ಅವರ ನಿರ್ಜೀವ ದೇಹ ಹಾಸಿಗೆಯಲ್ಲಿ ಬಿದ್ದಿತ್ತು. ಮಗುವಿನ ದೇಹ ನೆಲದಲ್ಲಿ ಬಿದ್ದಿದ್ದು, ಸುತ್ತಲೂ ರಕ್ತ ಹರಿದಿತ್ತು" ಎಂದು ಹೇಳಿದ್ದಾರೆ.

ಇಡೀ ಮನೆ ಚಲ್ಲಾಪಿಲ್ಲಿಯಾಗಿದ್ದು, ಅಮೂಲ್ಯ ವಸ್ತುಗಳು ಕಾಣೆಯಾಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿ ಹೇಳಿದ್ದಾರೆ. ನಬಿ ಕರೀಂ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಈ ಅವಳಿ ಕೊಲೆ ಬಗ್ಗೆ ಸಮಗ್ರ ತನಿಖೆ ಆರಂಭಿಸಲಾಗಿದೆ.

ಬಿಹಾರದ ಮುಜಾಫರ್ ಪುರ ಮೂಲದ ಸೋನು ಎಂಬ ವ್ಯಕ್ತಿ ಶಂಕಿತ ಆರೋಪಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಹೋಟೆಲ್ ಉದ್ಯೋಗಿಯಾಗಿದ್ದ ಈತ ಇದೇ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸವಿದ್ದ. ಸೋನು ಶನಿವಾರ ಬೆಳಿಗ್ಗೆಯಿಂದಲೇ ತಲೆ ಮರೆಸಿಕೊಂಡಿದ್ದ ಹಾಗೂ ಮೊಬೈಲ್ ಫೋನ್ ಹಾಗೂ ಸಿಸಿಟಿವಿ ಡಿವಿಆರ್ ಅನ್ನು ಕಟ್ಟಡದಿಂದ ಒಯ್ದಿದ್ದ ಎಂದು ಹೇಳಲಾಗಿದೆ. ಅನೂಜ್ ದ್ವಾರ್ಕಾದಲ್ಲಿ ಮನೆ ಖರೀದಿಸಿದ್ದು, ಅಲ್ಲಿಗೆ ಪದೇ ಪದೇ ಭೇಟಿ ನೀಡುತ್ತಿದ್ದರು. ಈ ಘಟನೆ ನಡೆಯುವ ಹಿಂದಿನ ದಿನ ಪ್ರಾರ್ಥನೆಗಾಗಿ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ತೆರಳಿದ್ದರು. ರಾತ್ರಿ ತಂದೆ ಮಗ ವಾಪಸ್ಸಾಗಿದ್ದರ, ತಾಯಿ, ಪತ್ನಿ ಹಾಗೂ ಪುತ್ರಿ ಅಲ್ಲೇ ಉಳಿದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News