×
Ad

ಉ.ಕೊರಿಯ ಜೊತೆ ಮಿಲಿಟರಿ ಸಹಕಾರ ; ವ್ಲಾದಿಮಿರ್‌ಪುಟಿನ್ ಸುಳಿವು

Update: 2023-09-13 23:04 IST

Photo- PTI

ಮಾಸ್ಕೋ : ತನ್ನ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು ರಶ್ಯ ನಡೆಸುತ್ತಿರುವ ‘ಪವಿತ್ರ ಯುದ್ಧ’ಕ್ಕೆ ಪೂರ್ಣ ಪ್ರಮಾಣದ ಹಾಗೂ ಷರತ್ತಿಲ್ಲದೇ ಬೆಂಬಲವನ್ನು ತನ್ನ ದೇಶ ನೀಡುವುದಾಗಿ ಉತ್ತರ ಕೊರಿಯದ ನಾಯಕ ಕಿಮ್ ಜೊಂಗ್ ಉನ್ , ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಬುಧವಾರ ತಿಳಿಸಿದ್ದಾರೆ. ರಶ್ಯ ಪ್ರವಾಸದಲ್ಲಿರುವ ಕಿಮ್ ಜೊಂಗ್ ಉನ್ ರಶ್ಯದ ದುರ್ಗಮ ಸೈಬೀರಿಯ ಪ್ರದೇಶದಲ್ಲಿರುವ ರಾಕೆಟ್ ಉಡಾವಣಾ ಸ್ಥಾವರವೊಂದರಲ್ಲಿ ಪುಟಿನ್ ಜೊತೆ ಶೃಂಗಸಭೆ ನಡೆಸಿದ ಸಂದರ್ಭ ಈ ಘೋಣೆ ಮಾಡಿದ್ದಾರೆ.

ಉತ್ತರ ಕೊರಿಯ ಜೊತೆ ಮಿಲಿಟರಿ ಸಹಕಾರವನ್ನು ಏರ್ಪಡಿಸಿಕೊಳ್ಳುವ ಸಾಧ್ಯತೆಯಿದೆಯೆಂದು ಪುಟಿನ್ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಅಮೆರಿಕದ ಜೊತೆಗೆ ಉಭಯದೇಶಗಳು ಎದುರಿಸುತ್ತಿರುವ ಸಂಘರ್ಷವಾಸ್ಥೆಯ ಬಗ್ಗೆಯೂ ಇಬ್ಬರು ನಾಯಕರು ಮಾತುಕತೆಯ ವೇಳೆ ಚರ್ಚಿಸಿದರು.

ಉಕ್ರೇನ್‌ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧವನ್ನು ಪರೋಕ್ಷವಾಗಿ ಪ್ರಸ್ತಾವಿಸಿದ ಕಿಮ್‌ಜೊಂಗ್, ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಹೋರಾಟದಲ್ಲಿ ಉತ್ತರ ಕೊರಿಯ ಯಾವತ್ತೂ ರಶ್ಯದ ಜೊತೆಗೆ ಕೈಜೋಡಿಸಲಿದೆ. ರಶ್ಯದ ಜೊತೆಗಿನ ಬಾಂಧವ್ಯಗಳನ್ನು ಬಲಪಡಿಸುವುದಕ್ಕೆ ಉತ್ತರ ಕೊರಿಯ ಮೊದಲ ಪ್ರಾಶಸ್ತ್ಯ ನೀಡಲಿದೆ ಎಂದರು.

ಮಾತುಕತೆಯ ಬಳಿಕ ವ್ಲಾದಿಮಿರ್ ಪುಟಿನ್ ಸುದ್ದಿಗಾರರ ಜೊತೆ ಮಾತನಾಡಿ, ಆರ್ಥಿಕ ಸಹಕಾರ, ಮಾನವೀಯ ಸಮಸ್ಯೆಗಳು ಹಾಗೂ ಪ್ರಾದೇಶಿಕ ಪರಿಸ್ಥಿತಿಯು ತಮ್ಮ ನಡುವೆ ನಡೆದ ಮಾತುಕತೆಯ ಕಾರ್ಯಸೂಚಿಯ ವಿಷಯಗಳಾಗಿದ್ದವೆಂದು ಹೇಳಿದರು.

ಪುಟಿನ್ ಜೊತೆ ಮಾತುಕತೆಗೆ ಮುನ್ನ ಕಿಮ್ ಜೊಂಗ್ ಅವರು ಸೊಯುಝ್ 2 ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ಭೇಟಿ ನೀಡಿದರು. ಬಾಹ್ಯಾಕಾಶ ಉಡಾವಣಾ ಕೇಂದ್ರದ ಅಧಿಕಾರಿಗಳನ್ನು ಭೇಟಿಯಾ ವೇಳೆ ಕಿಮ್‌ಜೊಂಗ್ ಅವರು ರಾಕೆಟ್‌ಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆಂದು ಮೂಲಗಳು ತಿಳಿಸಿವೆ.

ಕಿಮ್ ಜೊತೆಗಿನ ಮಾತುಕತೆಯಿಂದಾಗಿ, 18 ತಿಂಗಳುಗಳ ಸುದೀರ್ಘ ಉಕ್ರೇನ್ ಸಮರದಿಂದ ಬರಿದಾಗುತ್ತಿರುವ ತನ್ನ ಶಸ್ತ್ರಾಸ್ತ್ರಗಳ ದಾಸ್ತಾನನ್ನು ಮರಳಿ ತುಂಬುವ ಅವಕಾಶವು ರಶ್ಯಕ್ಕೆ ದೊರೆಯುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ತಿಳಿಸಿದ್ದಾರೆ. ಉತ್ತರ ಕೊರಿಯದ ಬಳಿಕ ಹಿಂದಿನ ಸೋವಿಯತ್‌ ರಶ್ಯ ಕಾಲದಲ್ಲಿ ವಿನ್ಯಾಸಗೊಂಡ ಲಕ್ಷಾಂತರ ಫಿರಂಗಿ ಶೆಲ್‌ಗಳು ಹಾಗೂ ರಾಕೆಟ್‌ಗಳ ದಾಸ್ತಾನಿದ್ದು, ಅವುಗಳ ಪೂರೈಕೆಯಿಂದಾಗಿ ಉಕ್ರೇನ್‌ನಲ್ಲಿ ರಶ್ಯ ಸೇನೆಯ ಬಲ ಇಮ್ಮಡಿಸಲಿದೆ ಎಂದವರು ಹೇಳಿದ್ದಾರೆ.

ನಾಲ್ಕು ವರ್ಷಗಳ ಆನಂತರದ ತನ್ನ ರಶ್ಯ ಭೇಟಿಯು, ಮಾಸ್ಕೊ ಜೊತೆಗಿನ ತನ್ನ ಬಾಂಧವ್ಯಗಳಿಗೆ ರಶ್ಯವು ವ್ಯೆಹಾತ್ಮಕ ಪ್ರಾಶಸ್ತ್ಯವನ್ನು ನೀಡುತ್ತದೆ ಎಂಬುದರ ಧ್ಯೋತಕವಾಗಿದೆ ಎಂದು ಕಿಮ್ ಹೇಳಿದ್ದಾರೆ.

ತನ್ನ ರಶ್ಯ ಪ್ರವಾಸದ ಸಂದರ್ಭ ಕಿಮ್ ಅವರು ರಶ್ಯದಿಂದ ಆರ್ಥಿಕ ಹಾಗೂ ಮಿಲಿಟರಿ ತಂತ್ರಜ್ಞಾನವನ್ನು ಕೋರುವ ನಿರೀಕ್ಷೆಯಿದೆ ಎಂದು ಉಪ ವಿದೇಶಾಂಗ ಸಚಿವ ಆ್ಯಡ್ರೆಯಿ ರುಡೆಂಕೊ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News