ರಷ್ಯಾದಿಂದ ಭಾರತಕ್ಕೆ ತೈಲ ಆಮದು ಶೇ.10ರಷ್ಟು ಇಳಿಕೆ
Photo: PTI
ಹೊಸದಿಲ್ಲಿ : ರಷ್ಯಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣ ಪ್ರಸಕ್ತ ವರ್ಷದ ಮೊದಲ ಎಂಟು ತಿಂಗಳಲ್ಲಿ ಶೇ.10ರಷ್ಟು ಇಳಿಕೆಯಾಗಿದ್ದರೂ, ಭಾರತಕ್ಕೆ ತೈಲ ಪೂರೈಸುವ ಪ್ರಮುಖ ದೇಶವಾಗಿ ರಷ್ಯಾ ತನ್ನ ಸ್ಥಾನ ಉಳಿಸಿಕೊಂಡಿದೆ. ಸೆಪ್ಟೆಂಬರ್ ನಲ್ಲಿ ಭಾರತ ಆಮದು ಮಾಡಿಕೊಂಡ ಒಟ್ಟು ತೈಲದ ಪೈಕಿ ಶೇ.34ರಷ್ಟು ಪಾಲನ್ನು ರಷ್ಯಾ ಹೊಂದಿದೆ ಎಂದು ಸರಕು ಮತ್ತು ಶಿಪ್ಪಿಂಗ್ ವ್ಯವಹಾರಗಳ ಮೇಲೆ ನಿಗಾ ಇಡುವ ಕೆಪ್ಲರ್ ಪ್ರಕಟಿಸಿದೆ.
ಏಜೆನ್ಸಿಯ ಇತ್ತೀಚಿನ ವರದಿಗಳ ಪ್ರಕಾರ ಸೆಪ್ಟೆಂಬರ್ ವೇಳೆಗೆ ಭಾರತ ದಿನಕ್ಕೆ 45 ದಶಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದು ಆಗಸ್ಟ್ ನಲ್ಲಿ ಆಮದು ಮಾಡಿಕೊಂಡ ತೈಲದ ಪ್ರಮಾಣಕ್ಕೆ ಹೋಲಿಸಿದರೆ 70 ಸಾವಿರ ಬ್ಯಾರಲ್‍ಗಳಷ್ಟು ಅಧಿಕ. ಭಾರತ ಆಮದು ಮಾಡಿಕೊಳ್ಳುತ್ತಿರುವ ಒಟ್ಟು ತೈಲದ ಪೈಕಿ 16 ಲಕ್ಷ ಬ್ಯಾರೆಲ್ ಅಥವಾ ಶೇ.34ರಷ್ಟು ರಷ್ಯಾದಿಂದ ಪೂರೈಕೆಯಾಗುತ್ತಿದೆ. ಒಟ್ಟಾರೆಯಾಗಿ ಭಾರತದ ತೈಲ ಆಮದು ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಅದೇ ಪ್ರಮಾಣದಲ್ಲಿದ್ದರೂ, ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ರಷ್ಯಾದಿಂದ ಆಮದು ಮಾಡಿಕೊಂಡ ತೈಲದ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ 1.8 ಲಕ್ಷ ಬ್ಯಾರಲ್ ಕಡಿಮೆ ಎಂದು ವರದಿ ಕೆಪ್ಲರ್ ವರದಿ ಹೇಳಿದೆ.
ಆದರೆ ಮಾರುಕಟ್ಟೆಯ ಚಲನಶೀಲತೆಯಿಂದಾಗಿ ಭಾರತ ರಷ್ಯಾದಿಂದ ಆಮದು ಕಡಿಮೆ ಮಾಡಿಕೊಂಡಿದೆಯೇ ವಿನಃ ಅಮೆರಿಕದ ಸುಂಕ ಬೆದರಿಕೆ ಮತ್ತು ರಷ್ಯಾದಿಂದ ಖರೀದಿ ಮಾಡುತ್ತಿರುವ ಭಾರತದ ಕ್ರಮವನ್ನು ಯೂರೋಪ್ ಟೀಕಿಸಿರುವುದರಿಂದ ಅಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.
ಜಾಗತಿಕ ತೈಲ ಬೆಲೆ ಕುಸಿತದ ಪರಿಣಾಮವಾಗಿ ರಷ್ಯಾ ಪ್ರತಿ ಬ್ಯಾರೆಲ್‍ಗೆ ನೀಡುತ್ತಿರುವ 2 ಡಾಲರ್ ಗಳ ಕಡಿತ ಭಾರತಕ್ಕೆ ದೊಡ್ಡ ಪ್ರಯೋಜನ ನೀಡುತ್ತಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇದು ಭಾರತೀಯ ರಿಫೈನರಿಗಳಿಗೆ ಹೊಸ ಗವಾಕ್ಷಿಗಳನ್ನು ತೆರೆದಿದ್ದು, ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕದ ಮೂಲದಿಂದ ಹೆಚ್ಚಿನ ಕಚ್ಚಾತೈಲದ ವೈವಿಧ್ಯವನ್ನು ಸಂಸ್ಕರಿಸಲು ಅವಕಾಶ ನೀಡಿದೆ ಎಂದು ಹೇಳಿದ್ದಾರೆ.