×
Ad

"ಆತ ಶೇ.100ರಷ್ಟು ಕಮ್ಯುನಿಸ್ಟ್ ಹುಚ್ಚ": ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಝೊಹ್ರಾನ್ ಮಮ್ದಾನಿ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ

Update: 2025-06-26 13:02 IST

ಝೊಹ್ರಾನ್ ಮಮ್ದಾನಿ / ಡೊನಾಲ್ಡ್ ಟ್ರಂಪ್ (Photo credit: X/@ZohranKMamdani, PTI)

ವಾಷಿಂಗ್ಟನ್: ನ್ಯೂಯಾರ್ಕ್ ನಗರದ ಡೆಮಾಕ್ರಟಿಕ್ ಮೇಯರ್ ಅಭ್ಯರ್ಥಿ ಸ್ಥಾನಕ್ಕಾಗಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಇಂಡೋ–ಅಮೆರಿಕನ್ ಅಭ್ಯರ್ಥಿ ಝೊಹ್ರಾನ್ ಮಮ್ದಾನಿ ಅವರು ಮಾಜಿ ಗವರ್ನರ್ ಆ್ಯಂಡ್ರ್ಯೂ ಕೌಮೋ ವಿರುದ್ಧ ಗೆಲುವು ಕಂಡಿದ್ದಾರೆ. ಈ ಹಿನ್ನಲೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜೊಹ್ರಾನ್ ಮಮ್ದಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್ "ಝೊಹ್ರಾನ್ ಮಮ್ದಾನಿ ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚ" ಎಂದು‌ ‌ ವಾಗ್ದಾಳಿ ನಡೆಸಿದ್ದಾರೆ.

"ಶೇ.100ರಷ್ಟು ಕಮ್ಯೂನಿಸ್ಟ್ ಹುಚ್ಚರಾದ ಝೊಹ್ರಾನ್ ಮಮ್ದಾನಿ‌ ಅವರನ್ನು ನ್ಯೂಯಾರ್ಕ್‌ ನಗರದ ಮೇಯರ್‌ ಅಭ್ಯರ್ಥಿಯ ಪ್ರಾಥಮಿಕ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ, ಡೆಮೊಕ್ರಾಟ್‌ಗಳು ತಮ್ಮ ನಿಜ ಬಣ್ಣ ಬಯಲು ಮಾಡಿದ್ದಾರೆ. ಮಮ್ದಾನಿ ಭಯಾನಕವಾಗಿ ಕಾಣುತ್ತಾರೆ, ಅವರ ಧ್ವನಿ ಗಡಸುತನದಿಂದ ಕೂಡಿದೆ, ಅವರು ಬುದ್ಧಿವಂತರಲ್ಲ ಆದರೆ ಡೆಮೊಕ್ರಾಟ್‌ಗಳು ಇಂತಹವರನ್ನು ಬೆಂಬಲಿಸುತ್ತಿದ್ದಾರೆ" ಎಂದು ಟ್ರಂಪ್‌ ತೀವ್ರವಾಗಿ ಟೀಕೆ ಮಾಡಿದ್ದಾರೆ.

ಶೇ. 90 ರಷ್ಟು ಮತಗಳನ್ನು ಎಣಿಕೆ ಮಾಡಲಾಗಿದ್ದು, 33 ವರ್ಷದ ಭಾರತೀಯ-ಅಮೆರಿಕನ್ ಝೊಹ್ರಾನ್ ಮಮ್ದಾನಿ ಶೇ. 43.5 ರಷ್ಟು ಮತಗಳನ್ನು ಗಳಿಸಿದ್ದಾರೆ.

ಕ್ವೀನ್ಸ್‌ನ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಮತ್ತು ಸ್ಟೇಟ್‌ ಅಸೆಂಬ್ಲಿ ಸದಸ್ಯರಾಗಿರುವ ಝೊಹ್ರಾನ್ ಅವರು ಭಾರತದ ಖ್ಯಾತ ಸಿನಿಮಾ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ ಉಗಾಂಡಾದ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಪುತ್ರ.

ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ (AOC) ಮತ್ತು ಸೆನೆಟರ್ ಚಕ್ ಶುಮರ್ ಸೇರಿದಂತೆ ಮಮ್ದಾನಿಯನ್ನು ಬೆಂಬಲಿಸಿದ ಇತರ ಪ್ರಗತಿಪರ ವ್ಯಕ್ತಿಗಳ ವಿರುದ್ಧವೂ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದರು.

ಮಮ್ದಾನಿಯಾಗಲಿ ಅಥವಾ ಅವರ ಪ್ರಚಾರಕರಾಗಲಿ ಟ್ರಂಪ್ ಅವರ ಹೇಳಿಕೆಗಳಿಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.

ಈಗ ಡೆಮಾಕ್ರಟಿಕ್ ನಾಮನಿರ್ದೇಶನ ಖಚಿತವಾಗಿರುವುದರಿಂದ, ಮಮ್ದಾನಿ ಇತಿಹಾಸ ನಿರ್ಮಿಸುವ ಹಾದಿಯಲ್ಲಿದ್ದಾರೆ. ನವೆಂಬರ್‌ನಲ್ಲಿ ಆಯ್ಕೆಯಾದರೆ, ಅವರು ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮತ್ತು ಮೊದಲ ಭಾರತೀಯ-ಅಮೆರಿಕನ್ ಮೇಯರ್ ಆಗುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News