ತೈವಾನ್ ಬಳಿ ಚೀನಾದ 11 ಹಡಗುಗಳು ಪತ್ತೆ
Photo: X
ತೈಪೆ: ತೈವಾನ್ ರಾಜಧಾನಿ ತೈಪೆಯ ಬಳಿ ಚೀನಾ ನೌಕಾಸೇನೆಯ 11 ಹಡಗುಗಳು ಪತ್ತೆಯಾಗಿವೆ ಎಂದು ತೈವಾನ್‍ನ ರಕ್ಷಣಾ ಸಚಿವಾಲಯ ಬುಧವಾರ ಹೇಳಿದೆ.
ಫೆಬ್ರವರಿ 14ರಂದು ತೈವಾನ್‍ನ ಕಿನ್ಮೆನ್ ದ್ವೀಪದ ಬಳಿ 4 ಜನರಿದ್ದ ಚೀನಾದ ದೋಣಿಯನ್ನು ತೈವಾನ್‍ನ ಕರಾವಳಿ ರಕ್ಷಣಾ ಪಡೆ ಬೆನ್ನಟ್ಟಿದಾಗ ಚೀನಾದ ದೋಣಿ ಮುಳುಗಿ ಅದರಲ್ಲಿದ್ದ ಇಬ್ಬರು ಮೃತಪಟ್ಟಿದ್ದು ಇತರ ಇಬ್ಬರನ್ನು ತಾತ್ಕಾಲಿಕವಾಗಿ ಬಂಧನದಲ್ಲಿರಿಸಲಾಗಿತ್ತು. ಈ ಘಟನೆಗೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪ್ರತಿಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ಬುಧವಾರ ಬೆಳಿಗ್ಗೆ 6 ಗಂಟೆಯವರೆಗಿನ ಕಳೆದ 24 ಗಂಟೆಗಳಲ್ಲಿ ಚೀನಾವು ತೈವಾನ್ ಜಲಸಂಧಿ ಹಾಗೂ ದ್ವೀಪದ ಸುತ್ತಮುತ್ತ 15 ಯುದ್ಧವಿಮಾನಗಳು, 11 ನೌಕಾಪಡೆಯ ಹಡಗುಗಳು ಹಾಗೂ ಒಂದು ಬಲೂನನ್ನು ರವಾನಿಸಿ ಒತ್ತಡ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸೋಮವಾರ ಚೀನಾದ 1 ಕಡಲ ಕಣ್ಗಾವಲು ಹಡಗು, 4 ಕರಾವಳಿ ರಕ್ಷಣಾ ದೋಣಿಗಳು ಕಿನ್ಮೆನ್ ಬಳಿಯ ನಿಷೇಧಿತ ವಲಯವನ್ನು ಪ್ರವೇಶಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.