ರಷ್ಯಾದ ಇಂಧನ ರಫ್ತಿನ ಆದಾಯದ ಶೇ.23 ರಷ್ಟು ಯುರೋಪಿಯನ್ ಒಕ್ಕೂಟದಿಂದಲೇ ಬಂದಿದೆ; CREA ವರದಿ
ಭಾರತದ ಪಾಲು ಕಡಿಮೆ; ಪಾಶ್ಚಿಮಾತ್ಯ ರಾಷ್ಟ್ರಗಳಿಂದ ದ್ವಂದ್ವ ನೀತಿ
PC: x.com/airnewsalerts
ಹೊಸದಿಲ್ಲಿ , ಆ. 7 – ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ವಿಶ್ವದ ಪ್ರಮುಖ ರಾಷ್ಟ್ರಗಳು ಹೇಗೆ ತಮ್ಮ ಸ್ವಾರ್ಥಕ್ಕಾಗಿ ದ್ವಂದ್ವ ನೀತಿ ಅನುಸರಿಸುತ್ತಿವೆ ಎಂಬುದನ್ನು ಫಿನ್‌ಲ್ಯಾಂಡ್ ಮೂಲದ ಸ್ವತಂತ್ರ ಚಿಂತಕರ ಚಾವಡಿ CREA (Centre for Research on Energy and Clean Air) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಉಕ್ರೇನ್ ಯುದ್ಧ ಆರಂಭದ ನಂತರ ರಷ್ಯಾದ ಇಂಧನ ರಫ್ತಿನಿಂದ ಬಂದಿರುವ ಆದಾಯದ ಶೇ.23 ರಷ್ಟು ಯುರೋಪಿಯನ್ ಒಕ್ಕೂಟದ ದೇಶಗಳಿಂದ ಬಂದಿದೆ. ಭಾರತದಿಂದ ಬಂದ ಪಾಲು ಮಾತ್ರ ಶೇ.13 ಎಂದು ವರದಿಯು ಬಹಿರಂಗಪಡಿಸಿದೆ.
G7 ರಾಷ್ಟ್ರಗಳಿಗೆ ಸೇರಿದ ಟ್ಯಾಂಕರ್‌ಗಳು ರಷ್ಯಾದಿಂದ ಸಮುದ್ರ ಮಾರ್ಗದ ಮೂಲಕ ರಫ್ತಾಗುತ್ತಿರುವ ತೈಲದ ಅರ್ಧಕ್ಕಿಂತ ಹೆಚ್ಚು ಸಾಗಿಸುತ್ತಿರುವ ಮಾಹಿತಿ ಬಹಿರಂಗವಾಗಿದೆ. ಆದರೆ, ಭಾರತವನ್ನು ಮಾತ್ರ ಗುರಿಯಾಗಿಸಿ ಪಾಶ್ಚಿಮಾತ್ಯ ರಾಷ್ಟ್ರಗಳು ತಾವು ಅನುಸರಿಸುತ್ತಿರುವ ದ್ವಂದ್ವತೆ ಕುರಿತು ಕೇಂದ್ರ ಸರ್ಕಾರವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅಂದಾಜು EUR 212 ಬಿಲಿಯನ್ ಮೌಲ್ಯದ ರಷ್ಯಾ ಇಂಧನವನ್ನು ಯುರೋಪಿಯನ್ ರಾಷ್ಟ್ರಗಳು ಖರೀದಿಸಿದ್ದು, ಆದರೆ ಭಾರತದ ಖರೀದಿ EUR 121 ಬಿಲಿಯನ್. ಇಂಧನ ಖರೀದಿಯಲ್ಲಿ ಚೀನಾ ಅಗ್ರಗಣ್ಯ ಖರೀದಿದಾರನಾಗಿಯೇ ಉಳಿದಿದ್ದು, ಅದರ ಆಮದು ಮೌಲ್ಯ EUR 200 ಬಿಲಿಯನ್‌ಗೆ ಮೀರುತ್ತದೆ.
ಇನ್ನೊಂದು ಮಹತ್ವದ ವಿಷಯವೆಂದರೆ, ಜೂನ್ ತಿಂಗಳಲ್ಲಿ G7 ರಾಷ್ಟ್ರಗಳ ಟ್ಯಾಂಕರ್‌ಗಳ ಮೂಲಕ ಸಾಗಿಸಲಾದ ರಷ್ಯಾ ತೈಲದ ಪ್ರಮಾಣ ಶೇ.36 ರಿಂದ ಶೇ.56ಕ್ಕೆ ಏರಿಕೆಯಾಗಿದೆ. ಭಾರತವು ತೈಲದ ಬೆಲೆ ಏರಿಕೆಯನ್ನು ತಡೆದು, ಜಾಗತಿಕ ಮಾರುಕಟ್ಟೆ ಸ್ಧಿರತೆ ಕಾಪಾಡಲು ಪಾತ್ರ ವಹಿಸಿದೆ ಎಂದು ಕೇಂದ್ರ ಸರ್ಕಾರವು ಹೇಳಿಕೊಂಡಿದೆ.
2025 ರ ಎರಡನೇ ತ್ರೈಮಾಸಿಕದಲ್ಲಿ, ರಷ್ಯಾದ ಪಳೆಯುಳಿಕೆ ಇಂಧನ ಆದಾಯದಲ್ಲಿ ಶೇ.18ರಷ್ಟು ಇಳಿಕೆ ಕಂಡುಬಂದಿದೆ. ಇದು ಉಕ್ರೇನ್ ಯುದ್ಧ ಆರಂಭವಾದ ನಂತರದ ಅತ್ಯಂತ ಕಡಿಮೆ ಮಟ್ಟವಾಗಿದೆ. ಈ ತ್ರೈಮಾಸಿಕದ ವಹಿವಾಟು ಪ್ರಮಾಣವು ಹಿಂದಿನ ತ್ರೈಮಾಸಿಕಕ್ಕಿಂತ ಶೇ.8ರಷ್ಟು ಹೆಚ್ಚಾಗಿದ್ದರೂ ಆದಾಯ ಇಳಿಕೆಯಾಗಿದೆ.
CREA ವರದಿ ಬಿಡುಗಡೆಯಾದ ದಿನದಂದೇ ಅಮೆರಿಕ ಭಾರತದ ಮೇಲೆ ಸುಂಕವನ್ನು ಶೇ.50 ರಷ್ಟು ಹೆಚ್ಚಿಸಿದೆ. ಜೊತೆಗೆ ಯುರೋಪಿಯನ್ ಒಕ್ಕೂಟ ನಯಾರಾ ಎನರ್ಜಿ ವಿರುದ್ಧ ನಿರ್ಬಂಧಗಳನ್ನು ಜಾರಿಗೆ ತಂದಿದೆ.
ರಷ್ಯಾವು ತನ್ನ ತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ಸಂಸ್ಕರಿತ ಇಂಧನಗಳ ಮೂಲಕ 2022 ರಿಂದ ಈವರೆಗೆ EUR 923 ಬಿಲಿಯನ್ ಗಳಿಸಿದೆ ಎಂದು ವರದಿಯು ಉಲ್ಲೇಖಿಸಿದೆ.