ಉಕ್ರೇನ್ ಮೇಲೆ ಡ್ರೋನ್ ಸುರಿಮಳೆಗರೆದ ರಶ್ಯ: 3 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ - AI
ಕೀವ್: ಆಗ್ನೇಯ ಉಕ್ರೇನ್ ನ ನಿಪ್ರೋ ನಗರದ ಮೇಲೆ ರಶ್ಯ ನಡೆಸಿದ ಸರಣಿ ಡ್ರೋನ್ ದಾಳಿಯಲ್ಲಿ ಮಗು ಸೇರಿದಂತೆ ಮೂರು ಮಂದಿ ಸಾವನ್ನಪ್ಪಿದ್ದು 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಪ್ರಾದೇಶಿಕ ಗವರ್ನರ್ ಸೆರ್ಹಿಯ್ ಲಿಸಾಕ್ ಹೇಳಿದ್ದಾರೆ.
ಡ್ರೋನ್ ದಾಳಿಯಲ್ಲಿ ಪುರಸಭೆಯ ಅಕ್ಕಪಕ್ಕದ ಸುಮಾರು 15 ಕಟ್ಟಡಗಳಿಗೆ ಹಾನಿಯಾಗಿದ್ದು ಬೆಂಕಿ ಆವರಿಸಿದೆ. ಐವರು ಮಕ್ಕಳ ಸಹಿತ ಕನಿಷ್ಠ 30 ಮಂದಿ ಗಾಯಗೊಂಡಿದ್ದು ಇವರಲ್ಲಿ 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ ಎಂದು ಲಿಸಾಕ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈಶಾನ್ಯದ ಖಾರ್ಕಿವ್ ಪ್ರಾಂತದ ಲಿಝಿಯಂ ನಗರದಲ್ಲಿ ರಶ್ಯದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಗವರ್ನರ್ ಒಲೆಹ್ ಸಿನಿಹುಬೋವ್ ಹೇಳಿದ್ದಾರೆ. 2022ರಲ್ಲಿ ಉಕ್ರೇನ್ ಮೇಲೆ ದಾಳಿ ಆರಂಭಿಸಿದ್ದ ಕೆಲವೇ ದಿನಗಳಲ್ಲಿ ಲಿಝಿಯಂ ನಗರವನ್ನು ರಶ್ಯ ವಶಪಡಿಸಿಕೊಂಡಿತ್ತು. ಆದರೆ ಬಳಿಕ ವರ್ಷಾಂತ್ಯಕ್ಕೆ ಈ ನಗರವನ್ನು ಉಕ್ರೇನ್ ಪಡೆ ಮರು ವಶಪಡಿಸಿಕೊಂಡಿದೆ.