ತುರ್ಕಿಯ: ಮತ್ತೆ ಮೂವರು ಮೇಯರ್ ಗಳ ಬಂಧನ
ರಿಸೆಪ್ ತಯ್ಯಿಪ್ ಎರ್ಡೊಗನ್ | Photo: NDTV
ಅಂಕಾರ: ತುರ್ಕಿಯಲ್ಲಿ ಮತ್ತೆ ಮೂವರು ವಿರೋಧ ಪಕ್ಷದ ಮೇಯರ್ ಗಳನ್ನು ಬಂಧಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ಶನಿವಾರ ವರದಿ ಮಾಡಿದೆ.
ಅಡಿಯಾಮನ್ ನಗರದ ಮೇಯರ್ ಅಬ್ದುರಹ್ಮಾನ್ ತುಟ್ಡೆರೆ, ಅದಾನ ನಗರಪಾಲಿಕೆ ಮೇಯರ್ ಝೆಯ್ದಾನ್ ಕರಲರ್, ಅಂಟಲ್ಯ ನಗರದ ಮೇಯರ್ ಮುಹಿಟ್ಟಿನ್ ಬೋಸೆಕ್ರನ್ನು ಶನಿವಾರ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಮೂವರೂ ಪ್ರಮುಖ ವಿರೋಧ ಪಕ್ಷ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ(ಸಿಎಚ್ಪಿ)ಯ ಸದಸ್ಯರಾಗಿದ್ದಾರೆ.
ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರಿಗೆ ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದ್ದ ಸಿಎಚ್ಪಿ ನಾಯಕ, ಇಸ್ತಾಂಬುಲ್ ನಗರದ ಮೇಯರ್ ಎಕ್ರಮ್ ಇಮಾಮೊಗ್ಲುರನ್ನು ನಾಲ್ಕು ತಿಂಗಳ ಹಿಂದೆ ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲಾಗಿದೆ. ಸ್ಥಳೀಯ ಚುನಾವಣೆಗಳಲ್ಲಿ ಸಿಎಚ್ಪಿ ಗಮನಾರ್ಹ ಸಾಧನೆ ತೋರಿದ ಬಳಿಕ ಎರ್ಡೋಗನ್ ಸರಕಾರ ವಿಪಕ್ಷವನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರೋಪಿಸಲಾಗಿದೆ.