×
Ad

ಟರ್ಕಿಯಲ್ಲಿ ಪ್ರಬಲ ಭೂಕಂಪ | ಕಟ್ಟಡ, ಸೇತುವೆ ಕುಸಿತ- ಕಾರ್ಯಾಚರಣೆ ಆರಂಭ

Update: 2025-08-11 07:59 IST

ಸಾಂದರ್ಭಿಕ ಚಿತ್ರ

ಟರ್ಕಿ : ಪಶ್ಚಿಮ ಟರ್ಕಿಯ ಸಿಂದಿರ್ಗಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಪ್ರಬಲ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಟರ್ಕಿಯ ವಿಕೋಪ ನಿರ್ವಹಣಾ ಏಜೆನ್ಸಿ ಪ್ರಕಟಿಸಿದೆ.

ಇಸ್ತಾಂಬೂಲ್ ಮತ್ತು ಆಕರ್ಷಕ ಪ್ರವಾಸಿ ತಾಣ ಇಝ್ಮೀರ್ ಸೇರಿದಂತೆ ದೇಶದ ಪಶ್ಚಿಮ ಭಾಗದ ಹಲವು ನಗರಗಳಲ್ಲಿ ಭೂಮಿ ಕಂಪಿಸಿರುವುದು ಗಮನಕ್ಕೆ ಬಂದಿದ್ದು, ಸಂಭಾವ್ಯ ಹಾನಿ ಮತ್ತು ಸಾವು ನೋವಿನ ಬಗ್ಗೆ ಇನ್ನೂ ಮಾಹಿತಿಗಳು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಲಿಕೇಸಿರ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳು ಕುಸಿದಿವೆ ಎಂದು ಟರ್ಕಿ ಮಾಧ್ಯಮಗಳು ಪ್ರಸಾರ ಮಾಡಿರುವ ಚಿತ್ರಗಳಿಂದ ತಿಳಿದುಬರುತ್ತವೆ. ರಾತ್ರಿ 7.53ಕ್ಕೆ ಭೂಕಂಪ ಸಂಭವಿಸಿದ್ದು, ಪ್ರಬಲ ಭೂಕಂಪದ ಬಳಿಕ 4.6 ತೀವ್ರತೆಯ ಕಂಪನ ಸಂಭವಿಸಿದೆ.

ಎಲ್ಲ ವಿಕೋಪ ನಿರ್ವಹಣೆ ತಂಡಗಳು ಮತ್ತು ಇತರ ಸಂಸ್ಥೆಗಳು ಶೋಧ ಮತ್ತು ಪರಿಹಾರ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡಿವೆ. ಇದುವರೆಗೆ ಯಾವುದೇ ಅನಪೇಕ್ಷಿತ ಘಟನೆಗಳು ಸಂಭವಿಸಿದ ಬಗ್ಗೆ ವರದಿಗಳು ಬಂದಿಲ್ಲ ಎಂದು ಆಂತರಿಕ ವ್ಯವಹಾರಗಳ ಸಚಿವ ಅಲಿ ಯಾರ್ಲಿಕೇಯ ಹೇಳಿದ್ದಾರೆ.

ಭೂಕಂಪ ಪೀಡಿತ ಪ್ರದೇಶವಾಗಿರುವ ಟರ್ಕಿಯಲ್ಲಿ 2023ರ ಫೆಬ್ರವರಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 53 ಸಾವಿರ ಮಂದಿ ಮೃತಪಟ್ಟಿದ್ದರು. ಜುಲೈ ಆರಂಭದಲ್ಲಿ ಸಂಭವಿಸಿದ 5.8 ತೀವ್ರತೆಯ ಭೂಕಂಪದಲ್ಲಿ ಒಬ್ಬ ಮೃತಪಟ್ಟು, 69 ಮಂದಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News