ಪಾಕಿಸ್ತಾನ: ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿ; 7 ಅಧಿಕಾರಿಗಳ ಮೃತ್ಯು
Photo : NDTV
ಪೇಷಾವರ, ಅ.11: ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಶುಕ್ರವಾರ ತಡರಾತ್ರಿ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 7 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಪ್ರತಿದಾಳಿಯಲ್ಲಿ 6 ಉಗ್ರರನ್ನೂ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಮುಖ್ಯಸ್ಥ ನೂರ್ ವಾಲಿ ಮೆಷುದ್ನನ್ನು ಗುರಿಯಾಗಿಸಿ ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆದಿರುವ ವರದಿಯ ಬೆನ್ನಲ್ಲೇ ಖೈಬರ್ ಪಖ್ತೂಂಕ್ವಾದ ಡಿಐ ಖಾನ್ ನಗರದ ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿ ನಡೆದಿದೆ.
ದಾಳಿಯ ಹೊಣೆಯನ್ನು ಟಿಟಿಪಿ ವಹಿಸಿಕೊಂಡಿದ್ದು ಆತ್ಮಹತ್ಯಾ ಬಾಂಬರ್ ಪೊಲೀಸ್ ತರಬೇತಿ ಕೇಂದ್ರದ ಗೇಟಿನ ಬಳಿ ಸ್ಫೋಟಕ ತುಂಬಿದ್ದ ವಾಹನವನ್ನು ಸ್ಫೋಟಿಸಿಕೊಂಡಿದ್ದಾನೆ. ಬಳಿಕ ಇತರರು ತರಬೇತಿ ಕೇಂದ್ರದೊಳಗೆ ನುಗ್ಗಿ ದಾಳಿ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದೆ.
ಸ್ಫೋಟದಲ್ಲಿ ತರಬೇತಿ ಕೇಂದ್ರದ ಗೋಡೆಗಳು ಕುಸಿದುಬಿದ್ದು ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಐದು ಅಧಿಕಾರಿಗಳು ಸಾವನ್ನಪ್ಪಿದ್ದು ಇತರ 13 ಪೊಲೀಸರು ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಎಲ್ಲಾ 6 ಉಗ್ರರನ್ನೂ ಹತ್ಯೆ ಮಾಡಲಾಗಿದ್ದು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ 200 ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.