"ನನ್ನ ಅಧ್ಯಕ್ಷರೇ... ಕ್ಷಮಿಸಿ, ನನ್ನ ಪತಿ!": ಮೊದಲ ಪತ್ರಿಕಾಗೋಷ್ಠಿಯಲ್ಲೇ ಫಜೀತಿಗೊಳಗಾದ ಟ್ರಂಪ್ ರ ನೂತನ ವಕ್ತಾರೆ
ಕೇವಲ 14 ನಿಮಿಷಗಳಲ್ಲಿ ಗೋಷ್ಠಿ ಮುಕ್ತಾಯ; ತಪ್ಪು ತಪ್ಪಾಗಿ ಮಾತನಾಡಿದ್ದು ವೈರಲ್
ಕೇಟೀ ಝಕಾರಾಯ (Photo: News 18)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ಪತ್ರಿಕಾ ಕಾರ್ಯದರ್ಶಿ ಕೇಟೀ ಝಕಾರಾಯ ಅವರ ಚೊಚ್ಚಲ ಪತ್ರಿಕಾಗೋಷ್ಠಿ ನಿರೀಕ್ಷೆಗೂ ಮೀರಿ ಸುದ್ದಿಯಾಗಿದೆ. ಆದರೆ, ಅವರ ಕಾರ್ಯವೈಖರಿಗಾಗಿ ಅಲ್ಲ; ಮಾತಿನ ಎಡವಟ್ಟು, ತಡವರಿಸಿದ ಉತ್ತರಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವ್ಯಂಗ್ಯಚಿತ್ರಗಳಿಗಾಗಿ!
ಮಂಗಳವಾರ ನಡೆದ ಪತ್ರಿಕಾಗೋಷ್ಠಿ ಕೇವಲ 14 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ನಾಲ್ಕು ಮಕ್ಕಳನ್ನು ಬೆಳೆಸುವುದರ ಜತೆಗೆ ವೃತ್ತಿಜೀವನದ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ವಿವರಿಸುವಾಗ ಝಕಾರಾಯ ಮಾಡಿದ ಒಂದು ಮಾತಿನ ತಪ್ಪು ಇಡೀ ಗೋಷ್ಠಿಯ ಗಮನ ಸೆಳೆಯಿತು.
'ಹಾಗಾಗಿ, ನನ್ನ ಅಧ್ಯಕ್ಷರೇ... ಕ್ಷಮಿಸಿ, ನನ್ನ ಪತಿ. ಅದು ಒಳ್ಳೆಯದು' ಎಂದು ಅವರು ಹೇಳಿದರು.
ತಕ್ಷಣವೇ ತಪ್ಪನ್ನು ತಿದ್ದಿಕೊಂಡರೂ, ಅಷ್ಟರಲ್ಲೇ ಅವರ ಮಾತಿನ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಟ್ರಂಪ್ ಅವರ ನೂತನ ವಕ್ತಾರೆಯ ಸಾಮರ್ಥ್ಯವನ್ನು ಪರಿಚಯಿಸಬೇಕಿದ್ದ ಮೊದಲ ಪತ್ರಿಕಾಗೋಷ್ಠಿಯೇ ಅಪಹಾಸ್ಯಕ್ಕೆ ಗುರಿಯಾಯಿತು.
'ಝಾಕ್ಬಾಟ್'ನಿಂದ 'ಎಸ್ಎನ್ಎಲ್ ಸ್ಕಿಟ್'ವರೆಗೆ!
ಝಕಾರಾಯ ಅವರ ಮಾತಿನ ತಪ್ಪು ಮಾತ್ರವಲ್ಲ, ಅವರ ಭಾಷಣದ ಶೈಲಿ ಮತ್ತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ರೀತಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯಕ್ಕೀಡಾಯಿತು.
ಪತ್ರಕರ್ತ ಆರನ್ ರೂಪರ್ ಅವರು ಎಕ್ಸ್ನಲ್ಲಿ ಗೋಷ್ಠಿಯ ವೀಡಿಯೊ ಹಂಚಿಕೊಂಡು, ಝಕಾರಾಯ ತಮ್ಮ ಹಿಂದಿನ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ರನ್ನು 'ವಿನ್ಸ್ಟನ್ ಚರ್ಚಿಲ್ ನಂತೆ ಕಾಣುವಂತೆ ಮಾಡಿದ್ದಾರೆ' ಎಂದು ಲೇವಡಿ ಮಾಡಿದರು.
ಶ್ವೇತಭವನದ ಮಾಜಿ ಪತ್ರಿಕಾ ಕಾರ್ಯದರ್ಶಿ ಹಾಗೂ ಟಿವಿ ನಿರೂಪಕಿ ಜೆನ್ ಪ್ಸಾಕಿ, ಗೋಷ್ಠಿಯನ್ನು 'ಸ್ಯಾಟರ್ಡೇ ನೈಟ್ ಲೈವ್' ಕಾರ್ಯಕ್ರಮದ ವಿಡಂಬನಾತ್ಮಕ ಸ್ಕಿಟ್ ಗೆ ಹೋಲಿಸಿದರು. ಝಕಾರಿಯಾ ಅವರ ಮಾತಿನ ನಡುವಿನ ವಿರಾಮಗಳು ಮತ್ತು ಸಿದ್ಧಪಡಿಸಿದ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಸ್ಯಕ್ಕೆ ವಸ್ತುವಾದವು.
'ದಿ ಗಾರ್ಡಿಯನ್' ಪತ್ರಿಕೆ ಅವರ ಭಾಷಣಶೈಲಿಯನ್ನು ಕೃತಕ ಬುದ್ಧಿಮತ್ತೆಯ ಅವತಾರಕ್ಕೆ ಹೋಲಿಸಿ, 'ಝಾಕ್ಬಾಟ್' ಎಂದು ಕರೆದಿದೆ. ಗೋಷ್ಠಿ ಮುಕ್ತಾಯಗೊಳಿಸುವ ಮೊದಲು ಅವರು ಕೇವಲ ಮೂರು ಮಾಧ್ಯಮಗಳ ಪ್ರತಿನಿಧಿಗಳಿಂದ ಪ್ರಶ್ನೆಗಳನ್ನು ಸ್ವೀಕರಿಸಿದ್ದನ್ನೂ ಪತ್ರಿಕೆ ಪ್ರಸ್ತಾಪಿಸಿದೆ.
ಟ್ರಂಪ್ ವಿರೋಧಿ ರಾಜಕೀಯ ಸಂಘಟನೆಯಾದ 'ಲಿಂಕನ್ ಪ್ರಾಜೆಕ್ಟ್', ಲೆಟಿಸ್ ಪಕ್ಕದಲ್ಲಿ ಝಕಾರಾಯ ಇರುವ ಚಿತ್ರವನ್ನು ಹಂಚಿಕೊಂಡಿತು. ಬ್ರಿಟನ್ ನ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರ ಅಧಿಕಾರಾವಧಿ ಎಷ್ಟು ಕಾಲ ಇರಲಿದೆ ಎಂಬುದನ್ನು ಲೆಟಿಸ್ ನ ತಾಜಾತನಕ್ಕೆ ಹೋಲಿಸಿ ನಡೆಸಿದ್ದ ವೈರಲ್ ವ್ಯಂಗ್ಯವನ್ನು ಇದು ನೆನಪಿಸಿತು.
ಟ್ರಂಪ್ ಆಡಳಿತದ ಮಾಜಿ ಸಂವಹನ ನಿರ್ದೇಶಕ ಆಂಥೋನಿ ಸ್ಕಾರಮುಚಿ ಕೂಡ ವ್ಯಂಗ್ಯವಾಡಿದರು. 'ಗಡಿಯಾರ ಓಡುತ್ತಿದೆ. ಇಲ್ಲಿಯವರೆಗೆ ಸ್ಕಾರಮುಚಿ ಅವರ ಅಧಿಕಾರಾವಧಿಯ 11ನೇ ಒಂದು ಭಾಗ' ಎಂದು ಕರೆದರು. ಶ್ವೇತಭವನದಲ್ಲಿ ಅವರ ಸ್ವಂತ ಅಧಿಕಾರಾವಧಿ ಅಲ್ಪಕಾಲದ್ದಾಗಿದ್ದುದನ್ನು ಅವರು ನೆನಪಿಸಿದರು.
ಉಕ್ರೇನ್ ಪ್ರಶ್ನೆಗೆ ಉತ್ತರಿಸಲು ತಡವರಿಕೆ
ವ್ಯಂಗ್ಯಗಳ ನಡುವೆಯೇ ಕೇಟೀ ಝಕಾರಾಯ ಅವರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ಸಿಗಲಿಲ್ಲ.
ಗೋಷ್ಠಿಯ ಆರಂಭದಲ್ಲಿ ಟ್ರಂಪ್ ಅವರನ್ನು ಹೊಗಳಲು ಮತ್ತು ಅವರ ಆಡಳಿತದ ಸಾಧನೆಗಳನ್ನು ಪ್ರಚಾರ ಮಾಡಲು ಝಕಾರಾಯ ಹೆಚ್ಚಿನ ಸಮಯ ಮೀಸಲಿಟ್ಟರು. ಇತ್ತೀಚಿನ ಕೆಲವು ಕಾರ್ಯಕ್ರಮಗಳಲ್ಲಿ ಖಾಲಿ ಆಸನಗಳಿದ್ದವು ಎಂಬ ವರದಿಗಳ ನಡುವೆಯೂ, ಟ್ರಂಪ್ ಅವರ ಚುನಾವಣಾ ಪ್ರಚಾರದ ರ್ಯಾಲಿಗಳಲ್ಲಿ ದಾಖಲೆ ಪ್ರಮಾಣದ ಜನರು ಭಾಗವಹಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ಫಾಕ್ಸ್ ನ್ಯೂಸ್ ವರದಿಗಾರ ಪೀಟರ್ ಡೂಸಿ ಅವರು, ಅಮೆರಿಕದ ಆಡಳಿತವು ಉಕ್ರೇನ್ನೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಸ್ಥಗಿತಗೊಳಿಸಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಝಕಾರಾಯ, 'ಈ ಬಗ್ಗೆ ನಿಮ್ಮನ್ನು ಸಂಪರ್ಕಿಸಬೇಕು' ಎಂದು ಉತ್ತರಿಸಿದರು.
ಬಳಿಕ 'ಡೈಲಿ ಮೇಲ್' ಪತ್ರಿಕೆಯ ಪ್ರಶ್ನೆಗೆ ಉತ್ತರಿಸುವಾಗ, ಗ್ರೀಸ್ ಗೆ ಅಮೆರಿಕದ ರಾಯಭಾರಿಯಾಗಿರುವ ಹಾಗೂ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಮಾಜಿ ಭಾವಿ ಪತ್ನಿ ಸಂಗಾತಿಯಾಗಿರುವ ಕಿಂಬರ್ಲಿ ಗಿಲ್ಫಾಯ್ಲ್ ಅವರನ್ನು ಪ್ರಸ್ತಾಪಿಸಿದರು.
ರಿಪಬ್ಲಿಕನ್ ಪಕ್ಷದ ದಾನಿಯೊಬ್ಬರಿಂದ ಹಣಕಾಸಿನ ನೆರವು ಕೇಳಿದ ಆರೋಪಗಳ ಹಿನ್ನೆಲೆಯಲ್ಲಿ ಗಿಲ್ಫಾಯ್ಲ್ ಅವರಿಗೆ ರಾಜೀನಾಮೆ ನೀಡುವಂತೆ ಶ್ವೇತಭವನ ಸೂಚಿಸಿದೆ ಎಂದು ಝಕಾರಾಯ ತಿಳಿಸಿದರು. ಆದರೆ, ಗಿಲ್ಫಾಯ್ಲ್ ಆರೋಪವನ್ನು ನಿರಾಕರಿಸಿದ್ದಾರೆ.
ಕುಟುಂಬ ಮತ್ತು ವೃತ್ತಿಜೀವನವನ್ನು ಹೇಗೆ ಸಮತೋಲನಗೊಳಿಸುತ್ತಾರೆ ಎಂಬುದರ ಕುರಿತು ಮಾತನಾಡಿದ ಬಳಿಕ ಝಕಾರಿಯಾ ಗೋಷ್ಠಿಯನ್ನು ಮುಕ್ತಾಯಗೊಳಿಸಿದರು. ಟ್ರಂಪ್ ಅವರು ಶ್ವೇತಭವನದ ದಕ್ಷಿಣದ ಹುಲ್ಲುಹಾಸಿನ ಪ್ರದೇಶದಲ್ಲಿ (ಸೌತ್ ಲಾನ್) ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಎಂದರು.
ಆದರೆ, 'ದಿ ವಾಷಿಂಗ್ಟನ್ ಪೋಸ್ಟ್' ವರದಿಯ ಪ್ರಕಾರ, ಟ್ರಂಪ್ ಸುಮಾರು ಒಂದೂವರೆ ಗಂಟೆಗಳ ಕಾಲ ಶ್ವೇತಭವನದಿಂದ ಹೊರಗೆ ಹೋಗಿರಲಿಲ್ಲ.
ಕೇವಲ 14 ನಿಮಿಷಗಳ ಗೋಷ್ಠಿಯಲ್ಲಿ 'ಬ್ರೀಟ್ಬಾರ್ಟ್ ನ್ಯೂಸ್', ಫಾಕ್ಸ್ ನ್ಯೂಸ್ ಮತ್ತು 'ಡೈಲಿ ಮೇಲ್' ಪ್ರತಿನಿಧಿಗಳಿಗೆ ಮಾತ್ರ ಪ್ರಶ್ನೆ ಕೇಳಲು ಅವಕಾಶ ನೀಡಲಾಗಿತ್ತು.
ಇಷ್ಟೆಲ್ಲ ಟೀಕೆಗಳ ನಡುವೆಯೂ ಟ್ರಂಪ್ ತಮ್ಮ ನೂತನ ವಕ್ತಾರೆಯನ್ನು ಸಮರ್ಥಿಸಿಕೊಂಡರು. ಅವರ ಕಾರ್ಯಕ್ಷಮತೆಯ ಕುರಿತು ಕೇಳಿದಾಗ, ಝಕಾರಾಯ 'ತುಂಬಾ ಒಳ್ಳೆಯವರು' ಎಂದು ತಮಗೆ ಅನಿಸಿದೆ ಎಂದು ಹೇಳಿದರು.
ಚೀನಾಕ್ಕೆ ಹೋದಾಗ ಬಾರ್ ಪರೀಕ್ಷೆ? ಅರ್ಹತೆಯ ಬಗ್ಗೆಯೂ ಚರ್ಚೆ:
ಝಕಾರಾಯ ಅವರ ಕಾರ್ಯವೈಖರಿಯ ಜತೆಗೆ ಅವರ ವೃತ್ತಿಪರ ಅರ್ಹತೆಯೂ ಚರ್ಚೆಗೆ ಬಂದಿದೆ.
ನೇಮಕಾತಿ ಘೋಷಿಸುವಾಗ ಟ್ರಂಪ್ ಅವರನ್ನು ವಕೀಲೆ ಎಂದು ಪರಿಚಯಿಸಿದ್ದರು. ಟ್ರಂಪ್ ಅವರ ಸಲಹೆಗಾರ ರಿಕ್ ಗ್ರೆನೆಲ್ ಸ್ಥಾಪಿಸಿದ ಲಾಭರಹಿತ ಸಂಸ್ಥೆ 'ಫಿಕ್ಸ್ ಕ್ಯಾಲಿಫೋರ್ನಿಯಾ'ದಲ್ಲಿ ಅವರು ಮುಖ್ಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರ ಲಿಂಕ್ಡ್ಇನ್ ಪ್ರೊಫೈಲ್ನಲ್ಲಿ ಉಲ್ಲೇಖಿಸಲಾಗಿದೆ.
ಝಕಾರಾಯ 2011ರಲ್ಲಿ ಕಾನೂನು ಪದವಿ ಪಡೆದಿರುವುದನ್ನು ಪೆಪ್ಪರ್ಡೈನ್ ವಿಶ್ವವಿದ್ಯಾಲಯವು 'ದಿ ವಾಷಿಂಗ್ಟನ್ ಪೋಸ್ಟ್'ಗೆ ದೃಢಪಡಿಸಿದೆ.
ಆದರೆ, ಅವರು ವಕೀಲರಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಬಾರ್ ಪರೀಕ್ಷೆಯಲ್ಲಿ ಎಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, 'ನಾನು ಚೀನಾಕ್ಕೆ ಹೋದಾಗ' ಎಂದು ಉತ್ತರಿಸಿದರು.
ಅಮೆರಿಕದಲ್ಲಿ ಕಾನೂನು ಅಭ್ಯಾಸ ಮಾಡಲು ಸಾಮಾನ್ಯವಾಗಿ ಯಾವುದಾದರೂ ರಾಜ್ಯದ ಅಥವಾ ಕೊಲಂಬಿಯಾ ಜಿಲ್ಲೆಯ ಬಾರ್ ನಲ್ಲಿ ನೋಂದಣಿ ಪಡೆಯುವುದು ಅಗತ್ಯ. ಝಕಾರಾಯ ಅವರು ಅಮೆರಿಕದಲ್ಲಿ ಕಾನೂನು ಅಭ್ಯಾಸ ಮಾಡಲು ಅಗತ್ಯವಾದ ಅನುಮತಿ ಪಡೆದಿದ್ದಾರೆಯೇ ಎಂಬುದನ್ನು ಶ್ವೇತಭವನ ಸ್ಪಷ್ಟಪಡಿಸಿಲ್ಲ ಎಂದು 'ದಿ ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
ಈ ಕುರಿತು ಶ್ವೇತಭವನ ನೀಡಿದ ಹೇಳಿಕೆಯಲ್ಲಿ, ಕಾನೂನು ಪದವಿ ಪಡೆದ ಬಳಿಕ ಝಕಾರಾಯ ತಮ್ಮ ಪತಿಯೊಂದಿಗೆ ಚೀನಾಕ್ಕೆ ತೆರಳಿದ್ದರು. ಅವರ ಪತಿ ಅಮೆರಿಕದ ಖಾಸಗಿ ಈಕ್ವಿಟಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ಅವರು ಅಂತರರಾಷ್ಟ್ರೀಯ ವಹಿವಾಟುಗಳಿಗೆ ಸಂಬಂಧಿಸಿದ ಕಾನೂನು ಕೆಲಸ ಮಾಡಿದ್ದರು ಎಂದು ತಿಳಿಸಲಾಗಿದೆ.
ಟ್ರಂಪ್ ಆಡಳಿತದ ಆರನೇ ಪತ್ರಿಕಾ ಕಾರ್ಯದರ್ಶಿ
ಎರಡನೇ ಮಗುವಿಗೆ ಜನ್ಮ ನೀಡಿದ ಬಳಿಕ ಆಗಸ್ಟ್ ನಲ್ಲಿ ಹುದ್ದೆ ತೊರೆದ ಕ್ಯಾರೋಲಿನ್ ಲೀವಿಟ್ ಅವರ ಸ್ಥಾನಕ್ಕೆ ಝಕಾರಾಯ ನೇಮಕಗೊಂಡಿದ್ದಾರೆ. ಟ್ರಂಪ್ ಆಡಳಿತದಲ್ಲಿ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರನೇ ವ್ಯಕ್ತಿ ಅವರು.
ಟ್ರಂಪ್ ಮೀಡಿಯಾ ಅಂಡ್ ಟೆಕ್ನಾಲಜಿ ಗ್ರೂಪ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಝಕಾರಿಯಾ, 'ಟ್ರುತ್ ಸೋಶಿಯಲ್' ಸಾಮಾಜಿಕ ಮಾಧ್ಯಮ ವೇದಿಕೆಯ ಹಿಂದಿರುವ ಈ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯಲ್ಲಿಯೂ ಕೆಲಸ ಮಾಡಿದ್ದಾರೆ.
ಟ್ರಂಪ್ ಮತ್ತು ಅವರ ನೀತಿಗಳನ್ನು ಸಮರ್ಥಿಸಿಕೊಳ್ಳಲು ಅವರು ಬಲಪಂಥೀಯ ಟಿವಿ ಜಾಲಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಅವರ ನೇಮಕಾತಿಯನ್ನು ಶ್ವೇತಭವನ ಬೆಂಬಲಿಸಿದೆ. ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್ ಅವರು ಝಕಾರಿಯಾ ಅವರನ್ನು ತಂಡಕ್ಕೆ 'ಅದ್ಭುತ ಸೇರ್ಪಡೆ' ಎಂದು ಹೇಳಿದ್ದು, ಈ ಹುದ್ದೆಗೆ ಅವರು ವಿಶಿಷ್ಟ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.