OpenAI ಕಚೇರಿಯಲ್ಲಿ ರಹಸ್ಯ ಧ್ವನಿಮುದ್ರಣ ಸಾಧನ ಪತ್ತೆ: ಉದ್ಯೋಗಿಯ ವಜಾ; FBI ತನಿಖೆ
ಸಾಂದರ್ಭಿಕ ಚಿತ್ರ (Photo: AI Generated)
ಹೊಸದಿಲ್ಲಿ: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ತನ್ನ ಕಚೇರಿಯೊಂದರಲ್ಲಿ ರಹಸ್ಯವಾಗಿ ಧ್ವನಿಮುದ್ರಣ ಮಾಡುವ ಸಾಧನ ಪತ್ತೆಯಾದ ಹಿನ್ನೆಲೆಯಲ್ಲಿ OpenAI ಸಂಸ್ಥೆ ತನ್ನ ಉದ್ಯೋಗಿಯೊಬ್ಬರನ್ನು ಕೆಲಸದಿಂದ ವಜಾಗೊಳಿಸಿದೆ. ಈ ಪ್ರಕರಣವನ್ನು ಎಫ್ಬಿಐಗೆ ನೀಡಲಾಗಿದ್ದು, ತನಿಖೆಗೆ ಸಹಕಾರ ನೀಡುತ್ತಿರುವುದಾಗಿ OpenAI ತಿಳಿಸಿದೆ.
fortune ವರದಿಯ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ಅಧಿಕಾರಿಗಳು 35 ವರ್ಷದ ಸೌದಿ ಪ್ರಜೆ ಅಬ್ದುಲ್ ರಹಮಾನ್ ಅಲ್ ಫೋಝಾನ್ ಅವರನ್ನು ಬಂಧಿಸಿದ್ದಾರೆ. ಅವರು OpenAI ಸಂಸ್ಥೆಯಲ್ಲಿ ಎಂಜಿನಿಯರಿಂಗ್ ವಿಭಾಗದ ಪ್ರಮುಖ ಹುದ್ದೆಯಲ್ಲಿದ್ದರು ಎನ್ನಲಾಗಿದೆ.
ಸಂಸ್ಥೆಯ ಅತ್ಯಂತ ಗೌಪ್ಯ ಚರ್ಚೆಗಳು ನಡೆಯುತ್ತಿದ್ದ ಕೊಠಡಿಯಲ್ಲಿ ಯಾರಿಗೂ ತಿಳಿಯದಂತೆ ರಹಸ್ಯ ಧ್ವನಿಮುದ್ರಣ ಸಾಧನ ಅಳವಡಿಸಿದ ಆರೋಪ ಅವರ ಮೇಲಿದೆ.
FBI ಪ್ರಕಾರ, ಸೆಪ್ಟೆಂಬರ್ 30ರಂದು ಈ ಘಟನೆ ಬೆಳಕಿಗೆ ಬಂದಿದೆ. OpenAI ಸಂಸ್ಥೆಯ ತಾಂತ್ರಿಕ ಕಣ್ಗಾವಲು ತಂಡವು ಸಭಾ ಕೊಠಡಿಯೊಂದರಲ್ಲಿ ಟಿವಿಯ ಹಿಂಭಾಗದಲ್ಲಿರುವ ಯುಎಸ್ ಬಿ ಪೋರ್ಟ್ ಗೆ ಅಳವಡಿಸಿದ್ದ ರಹಸ್ಯ ಧ್ವನಿಮುದ್ರಣ ಸಾಧನವನ್ನು ಪತ್ತೆಹಚ್ಚಿದೆ. ಆ ಸಾಧನವನ್ನು ಟಾಯ್ಲೆಟ್ ಪೇಪರ್ನಿಂದ ಮುಚ್ಚಿಟ್ಟು ಯಾರಿಗೂ ಪತ್ತೆಯಾಗದಂತೆ ಮರೆಮಾಚಲಾಗಿತ್ತು ಎಂದು ಆರೋಪಿಸಲಾಗಿದೆ.
ಅತ್ಯಾಧುನಿಕ ಎನ್ಕ್ರಿಪ್ಶನ್ ತಂತ್ರಜ್ಞಾನ, ಧ್ವನಿಯನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹಾಗೂ ದಾಖಲೆಗೊಂಡ ಮಾಹಿತಿಯನ್ನು ವರ್ಗಾಯಿಸುವ ವ್ಯವಸ್ಥೆಯನ್ನು ಈ ಸಾಧನ ಹೊಂದಿತ್ತು ಎಂದು ವರದಿಯಾಗಿದೆ.
‘ಈ ಕುರಿತು OpenAI ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನಮ್ಮ ಕಚೇರಿಯಲ್ಲಿ ಪತ್ತೆಯಾದ ಸಾಧನವನ್ನು ವಿಶ್ಲೇಷಿಸಲು ಹಾಗೂ ಅದನ್ನು ಅಳವಡಿಸಿದ ನಿರ್ದಿಷ್ಟ ಉದ್ಯೋಗಿಯನ್ನು ಪತ್ತೆಹಚ್ಚಲು AI ಮಾದರಿಗಳನ್ನು ಬಳಸಿದ್ದೇವೆ ಎಂದು ತಿಳಿಸಿದೆ. ಆ ಉದ್ಯೋಗಿ ಕೆಲ ದಿನಗಳ ಹಿಂದೆ ಈ ಸಾಧನವನ್ನು ಅಳವಡಿಸಿದ್ದರೆಂದು ಆರೋಪಿಸಲಾಗಿದೆ.
ಗೌಪ್ಯ AI ಚರ್ಚೆಗಳನ್ನು ಗುರಿಯಾಗಿಸಿಕೊಂಡು ಸಾಧನ ಅಳವಡಿಸಲಾಗಿತ್ತು: FBI ಆರೋಪ
ತನಿಖಾಧಿಕಾರಿಗಳ ಪ್ರಕಾರ, OpenAI ಸಂಸ್ಥೆಯ ಸಂಶೋಧನೆ, ಉತ್ಪನ್ನಗಳ ಯೋಜನೆ, ವ್ಯವಹಾರ ಅಭಿವೃದ್ಧಿಯ ಅವಕಾಶಗಳು ಹಾಗೂ ಕಾರ್ಯತಂತ್ರದ ನಿರ್ಧಾರಗಳಿಗೆ ಸಂಬಂಧಿಸಿದ ಚರ್ಚೆಗಳು ಈ ಸಭಾ ಕೊಠಡಿಯಲ್ಲಿ ನಿಯಮಿತವಾಗಿ ನಡೆಯುತ್ತಿದ್ದವು. ಸಂಸ್ಥೆಯ ಸುಧಾರಿತ ಎಐ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸಂಭಾಷಣೆಗಳನ್ನು ರಹಸ್ಯವಾಗಿ ಧ್ವನಿಮುದ್ರಿಸುವ ಉದ್ದೇಶದಿಂದ ಈ ಸಾಧನವನ್ನು ಅಳವಡಿಸಲಾಗಿತ್ತು.
ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ ಈ ಪ್ರಕರಣವನ್ನು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ ಎಂದು ಹೇಳಿದ್ದಾರೆ. ಅಬ್ದುಲ್ ರಹಮಾನ್ ಅಲ್ ಫೋಝಾನ್ ಅವರು ತಮ್ಮ ಉದ್ಯೋಗದಾತ ಸಂಸ್ಥೆಯ ಕಾರ್ಯನಿರ್ವಾಹಕ ಸಭಾ ಕೊಠಡಿಯಲ್ಲಿ ರಹಸ್ಯ ಧ್ವನಿಮುದ್ರಣ ಸಾಧನವೊಂದನ್ನು ಇಟ್ಟು, ಸಂಸ್ಥೆಯ ಸೂಪರ್ ಇಂಟೆಲಿಜೆನ್ಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೂಕ್ಷ್ಮ ಸಂವಹನಗಳನ್ನು ರಹಸ್ಯವಾಗಿ ದಾಖಲಿಸಲು ಯತ್ನಿಸಿರುವ ಬಗ್ಗೆ ಆರೋಪಿಸಲಾಗಿದೆ ಎಂದು ಹೇಳಿದ್ದಾರೆ.