ಮಾಜಿ ಯೋಧನಿಗೆ ಗುಂಡಿಟ್ಟು ಹತ್ಯೆಗೈದ ಇಬ್ಬರು ದುಷ್ಕರ್ಮಿಗಳನ್ನು ಥಳಿಸಿ ಕೊಂದ ಗುಂಪು
ಸಾಂದರ್ಭಿಕ ಚಿತ್ರ
ರೊಹ್ತಾಸ್: ಮಾಜಿ ಯೋಧರೊಬ್ಬನಿಗೆ ಗುಂಡಿಟ್ಟು ಹತ್ಯೆಗೈದು, ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಸೆರೆ ಹಿಡಿದಿರುವ ಗುಂಪೊಂದು, ಅವರನ್ನು ಥಳಿಸಿ ಹತ್ಯೆಗೈದಿರುವ ಘಟನೆ ಬಿಹಾರದ ರೊಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮತ್ತೊಬ್ಬ ಆರೋಪಿತ ದುಷ್ಕರ್ಮಿಯನ್ನೂ ತೀವ್ರವಾಗಿ ಥಳಿಸಲಾಗಿದ್ದು, ಆತ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.
ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಮಾಜಿ ಯೋಧರನ್ನು ಬಿಜೇಂದ್ರ ಸಿಂಗ್ (55) ಎಂದು ಗುರುತಿಸಲಾಗಿದೆ. ಗುಂಪು ಹಲ್ಲೆಯಲ್ಲಿ ಮೃತಪಟ್ಟ ದುಷ್ಕರ್ಮಿಗಳನ್ನು ಮಿಥಿಲೇಶ್ ಕುಮಾರ್ (23) ಹಾಗೂ ಆದಿತ್ಯ ಕುಮಾರ್ (25) ಎಂದು ಗುರುತಿಸಲಾಗಿದೆ. ಮೂರನೆಯ ದುಷ್ಕರ್ಮಿಯನ್ನು ಅಜೀತ್ ಕುಮಾರ್ ಎಂದು ಗುರುತಿಸಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಕುಮಾರ್, “ಈ ಘಟನೆಯು ಬುಧವಾರ ಬೆಳಗ್ಗೆ 9.45 ಗಂಟೆಗೆ ಕಲ್ಯಾಣಿ ಗ್ರಾಮದ ಬಳಿ ನಡೆದಿದ್ದು, ನಿವೃತ್ತ ಸೇನಾ ಯೋಧ ಬಿಜೇಂದ್ರ ಸಿಂಗ್ ಅವರನ್ನು ಗುಂಡಿಟ್ಟು ಹತ್ಯೆಗೈದು, ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ನಡೆದಿದೆ” ಎಂದು ಮಾಹಿತಿ ನೀಡಿದ್ದಾರೆ.
“ಮಾಜಿ ಯೋಧನ ಹತ್ಯೆ ಹಿಂದಿನ ಕಾರಣವನ್ನು ಇನ್ನಷ್ಟೆ ಪತ್ತೆ ಹಚ್ಚಬೇಕಿದೆ. ಬಿಜೇಂದ್ರ ಸಿಂಗ್ ಅವರ ಹತ್ಯೆ ಹಿಂದಿನ ರಹಸ್ಯವನ್ನು ಭೇದಿಸಲು ಹಾಗೂ ಅದರ ಬೆನ್ನಿಗೇ ಗುಂಪಿನ ಹಲ್ಲೆಯಿಂದ ಸಂಭವಿಸಿರುವ ಇಬ್ಬರ ಮೃತ್ಯುವಿನ ಕುರಿತು ತನಿಖೆ ನಡೆಸಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.