ಪಶ್ಚಿಮ ಏಷ್ಯಾ ಯುದ್ಧಕ್ಕೆ ಮಿಲಿಟರಿ ಬಲದ ಮೂಲಕ ಪರಿಹಾರ ಸಾಧ್ಯವಿಲ್ಲ: ಇರಾನ್
Photo Credit : PTI
ಟೆಹರಾನ್: ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧಕ್ಕೆ ಮಿಲಿಟರಿ ಬಲದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಇರಾನ್‍ನ ಉನ್ನತ ರಾಜತಾಂತ್ರಿಕರು ರವಿವಾರ ಸ್ಪಷ್ಟಪಡಿಸಿದ್ದಾರೆ.
ವಿದೇಶಿ ರಾಯಭಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ `ಈ ಬಿಕ್ಕಟ್ಟಿಗೆ ಯಾವುದೇ ಮಿಲಿಟರಿ ಪರಿಹಾರ ಸಾಧ್ಯವಿಲ್ಲ, ಅಥವಾ ಹೊಸ ನಿರ್ಬಂಧಗಳ ಆಧಾರಿತ ಪರಿಹಾರವೂ ಸಾಧ್ಯವಿಲ್ಲ. ಕೇವಲ ನ್ಯಾಯ ಮತ್ತು ನಿಷ್ಪಕ್ಷಪಾತದ ಆಧಾರದ ಮೇಲೆ ನಡೆಯುವ ಮಾತುಕತೆಗಳು ಮಾತ್ರ ಈ ಸಂಘರ್ಷವನ್ನು ಕೊನೆಗೊಳಿಸಬಹುದು' ಎಂದು ಹೇಳಿದರು. ನಮ್ಮ ಶತ್ರುಗಳು ಮತ್ತೆ ಮಿಲಿಟರಿ ಸಂಘರ್ಷದ ಹಾದಿಯನ್ನೇ ಆಯ್ದುಕೊಂಡರೆ, ನಮ್ಮ ಪ್ರತ್ಯುತ್ತರವು ಹಿಂದಿಗಿಂತಲೂ ಹೆಚ್ಚು ಪ್ರಬಲವಾಗಿರುತ್ತದೆ ಮತ್ತು ನಾವು ಮತ್ತಷ್ಟು ಶಕ್ತಿಯಿಂದ ನಮ್ಮನ್ನು ಸಮರ್ಥಿಸಿಕೊಂಡು ಹೋರಾಡಲಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಮಧ್ಯೆ, ಅಮೆರಿಕದೊಂದಿಗಿನ ಮಧ್ಯಂತರ ಒಪ್ಪಂದದಲ್ಲಿ ಇರಾನ್ ವಿಧಿಸಿರುವ ಏಳು ಷರತ್ತುಗಳು ಈಡೇರುವವರೆಗೂ ಹಾರ್ಮುಝ್ ಜಲಸಂಧಿಯನ್ನು ತೆರೆಯಲಾಗುವುದಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಹೇಳಿರುವುದಾಗಿ ರವಿವಾರ `ನೂರ್‍ನ್ಯೂಸ್' ವರದಿ ಮಾಡಿದೆ.