ಇರಾನ್‍ಗೆ `ಸುಲಭ ಅಥವಾ ಕಠಿಣ' ಮಾರ್ಗದ ಎಚ್ಚರಿಕೆ ನೀಡಿದ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್: ಇರಾನ್ ಹಾಗೂ ಅಮೆರಿಕ ನಡುವೆ ಉದ್ವಿಗ್ನತೆ ಮುಂದುವರಿದಿದ್ದು, ರಾಜತಾಂತ್ರಿಕ ಪ್ರಯತ್ನಗಳು ವಿಫಲಗೊಳ್ಳುತ್ತಿರುವಂತೆಯೇ, ತಾವು ಇರಾನ್ ಬಗ್ಗೆ ಒಂದು ನಿರ್ಧಾರ ತಗೆದುಕೊಳ್ಳಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಇರಾನ್ `ಸುಲಭ ಅಥವಾ ಕಠಿಣ' ಮಾರ್ಗಗಳಲ್ಲಿ ಯಾವುದೇ ಒಂದನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಾವು ಇರಾನ್ ಬಗ್ಗೆ ಒಂದು ನಿರ್ಧಾರ ತಗೆದುಕೊಳ್ಳಬೇಕಾಗಿದೆ. ಈಗಿರುವ ಒಂದೇ ಪ್ರಶ್ನೆಯೆಂದರೆ, ಅದು ಸುಲಭದ ಹಾದಿಯೋ ಅಥವಾ ಕಠಿಣವಾದ ಹಾದಿಯೋ ಎಂಬುದು. ನಾವು ಈ ವಿಷಯವನ್ನು ಸುಲಭವಾಗಿ ಅಥವಾ ಕಠಿಣ ಮಾರ್ಗದಲ್ಲಿ ನಿಭಾಯಿಸಲು ಸಿದ್ಧರಿದ್ದೇವೆ ' ಎಂದು ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ. ಇರಾನ್ ಸಂಪೂರ್ಣವಾಗಿ ಸರ್ವನಾಶವಾಗಿದೆ. ಆದ್ದರಿಂದ ಪರಮಾಣು ಶಸ್ತ್ರಾಸ್ತ್ರ ತಯಾರಿಸುವ ಯಾವುದೇ ಯೋಜನೆಯನ್ನು ವಾಸ್ತವವಾಗಿ ಕೈಬಿಟ್ಟಿದೆ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಈ ಮಧ್ಯೆ, ಅಮೆರಿಕ ಭಾರೀ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯನ್ನು ಪುನರಾರಂಭಿಸಿದರೆ ಇರಾನ್‍ಗೆ ಬೆಂಬಲ ನೀಡಲು ಸಿದ್ಧರಾಗಿರುವಂತೆ ಲೆಬನಾನ್, ಯಮನ್ ಮತ್ತು ಇರಾಕ್‍ನಲ್ಲಿರುವ ತನ್ನ ಮಿತ್ರ ಗುಂಪುಗಳಿಗೆ ಟೆಹರಾನ್ ಸೂಚನೆ ನೀಡಿದೆ. ಹಾರ್ಮುಝ್ ಜಲಸಂಧಿಯಿಂದ ಹಿಡಿದು ಮಧ್ಯಪ್ರಾಚ್ಯದಲ್ಲಿರುವ ಹಾಗೂ ಮಧ್ಯಪ್ರಾಚ್ಯದ ಹೊರಗಿರುವ ಅಮೆರಿಕದ ಹಿತಾಸಕ್ತಿಗಳನ್ನು ಗುರಿಯಾಗಿಸಿ ಸಂಘಟಿತ ಪ್ರತಿದಾಳಿ ನಡೆಸಲು ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ಇರಾನಿ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.