Saudi Arabia | ರಿಯಾದ್ ನ ಅರಾಮ್ಕೊ ಘಟಕದಲ್ಲಿ ಭಾರಿ ಬೆಂಕಿ; ಕ್ಷಿಪಣಿ, ಡ್ರೋನ್ ದಾಳಿ ನಡೆಸಿದ್ದಾಗಿ ಹೌದಿಗಳ ಹೇಳಿಕೆ
Photo Credit : X
ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ದಕ್ಷಿಣದಲ್ಲಿರುವ ಅರಾಮ್ಕೊ ಘಟಕದಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಘಟಕದಿಂದ ಜ್ವಾಲೆಗಳು ಹಾಗೂ ದಟ್ಟ ಹೊಗೆ ಏರುತ್ತಿರುವುದು ಕಂಡುಬಂದಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಯೆಮೆನ್‌ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಹೇಳಿಕೊಂಡಿದ್ದಾರೆ.
ಘಟಕದ ಮೇಲೆ ದಾಳಿ ನಡೆದಿರುವುದನ್ನು ಸೌದಿ ಅಧಿಕಾರಿಗಳು ದೃಢಪಡಿಸಿಲ್ಲ.
ಅರಾಮ್ಕೊದ ರಿಯಾದ್ ಸಂಸ್ಕರಣಾಗಾರದಲ್ಲಿ ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವುದನ್ನು ಸ್ಥಳದಲ್ಲಿದ್ದ ಎಎಫ್‌ಪಿ ಪತ್ರಕರ್ತರು ವರದಿ ಮಾಡಿದ್ದಾರೆ. ಆಂಬ್ಯುಲೆನ್ಸ್ ಗಳು ಮತ್ತು ಪೊಲೀಸ್ ವಾಹನಗಳನ್ನೂ ಘಟಕದ ಸಮೀಪ ನಿಯೋಜಿಸಲಾಗಿತ್ತು. ಅರಾಮ್ಕೊ ಘಟಕದ ಬಳಿ ಭಾರಿ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿರುವುದಾಗಿ ರಾಯಿಟರ್ಸ್ ಗೆ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಹೌದಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ, ರಿಯಾದ್ ನಲ್ಲಿರುವ ತೈಲ ಘಟಕವನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ ಗಳ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಹೇಳಿದ್ದಾರೆ. ದಾಳಿಗೆ ಗುರಿಯಾದ ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.
ದಾಳಿಯ ಬಳಿಕ ಅರಾಮ್ಕೊ ಘಟಕದಿಂದ ಬೃಹತ್ ಪ್ರಮಾಣದಲ್ಲಿ ಕಪ್ಪು ಹೊಗೆ ಏರುತ್ತಿರುವ ದೃಶ್ಯಗಳನ್ನು ಒಳಗೊಂಡ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಘಟಕದೊಳಗಿನ ಕನಿಷ್ಠ ಎರಡು ಸ್ಥಳಗಳಿಂದ ಜ್ವಾಲೆಗಳು ಹಾಗೂ ದಟ್ಟ ಕಪ್ಪು ಹೊಗೆ ಹೊರಹೊಮ್ಮುತ್ತಿರುವುದು ವೀಡಿಯೊಗಳಲ್ಲಿ ಕಂಡುಬಂದಿದೆ. ಹೊಗೆ ಆಕಾಶಕ್ಕೆ ವ್ಯಾಪಿಸುತ್ತಿದ್ದಂತೆ ಬೆಂಕಿಯ ತೀವ್ರತೆಯೂ ಗೋಚರಿಸಿದೆ.
ಸೌದಿ–ಹೌದಿ ಸಂಘರ್ಷ
ಜುಲೈನಲ್ಲಿ ಸೌದಿ ಅರೇಬಿಯಾ ಮತ್ತು ಹೌದಿಗಳ ನಡುವಿನ ಹೋರಾಟ ಪುನರಾರಂಭವಾದ ಬಳಿಕ ಈ ಬೆಳವಣಿಗೆ ನಡೆದಿದೆ. ಗುರುವಾರ ರಾತ್ರಿ ಸೌದಿ ಅರೇಬಿಯಾ ಸನಾ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಹೌದಿಗಳು ಹೇಳಿಕೊಂಡಿದ್ದರು. ಯೆಮೆನ್ ರಾಜಧಾನಿ ಸನಾ ಮೇಲೆ ನಡೆದ ಇಂತಹ ಮೊದಲ ದಾಳಿ ಇದಾಗಿದೆ ಎಂದು ಅವರು ಹೇಳಿದ್ದರು.
ಹೌದಿ ಬೆಂಬಲಿತ ಅಲ್–ಮಸಿರಾ ಟಿವಿ, ‘ಸೌದಿ ಶತ್ರು ವಿಮಾನಗಳು’ ಸನಾ ಮೇಲೆ 26 ದಾಳಿಗಳನ್ನು ನಡೆಸಿವೆ ಎಂದು ಈ ಹಿಂದೆ ವರದಿ ಮಾಡಿತ್ತು. ಚಾನೆಲ್ ಈ ದಾಳಿಗಳನ್ನು ‘ಸೌದಿ ಆಕ್ರಮಣ’ ಎಂದು ಹೇಳಿತ್ತಾದರೂ, ದಾಳಿಯ ಗುರಿಗಳು ಅಥವಾ ಸಾವುನೋವುಗಳ ಕುರಿತು ಯಾವುದೇ ವಿವರ ನೀಡಿರಲಿಲ್ಲ.
ಸನಾದಲ್ಲಿದ್ದ ಇಬ್ಬರು ಎಎಫ್‌ಪಿ ವರದಿಗಾರರು ಭಾರಿ ಸ್ಫೋಟಗಳ ಸದ್ದು ಕೇಳಿರುವುದಾಗಿ ಹಾಗೂ ಯೆಮೆನ್ ರಾಜಧಾನಿಯ ಮೇಲೆ ಯುದ್ಧವಿಮಾನಗಳು ಕ್ಷಿಪಣಿಗಳನ್ನು ಹಾರಿಸುತ್ತಿರುವುದನ್ನು ಕಂಡಿರುವುದಾಗಿ ವರದಿ ಮಾಡಿದ್ದಾರೆ.
ಯೆಮೆನ್ ನ ವಾಯವ್ಯ ಭಾಗದಲ್ಲಿರುವ ಹೌದಿಗಳ ಪ್ರಬಲ ನೆಲೆಯಾಗಿರುವ ಸದಾ ಗವರ್ನರೇಟ್‌ನ ದೂರಸಂಪರ್ಕ ಜಾಲದ ಮೇಲೂ ಕ್ಷಿಪಣಿ ದಾಳಿಗಳು ನಡೆದಿರುವುದಾಗಿ ಹೌದಿಗಳ ಅಲ್–ಮಸಿರಾ ಚಾನೆಲ್ ವರದಿ ಮಾಡಿದೆ.
ಸೌದಿ ಇಂಧನ ಸ್ಥಾವರಗಳೇ ಗುರಿ
ಸೌದಿ ಅರೇಬಿಯಾ ಮತ್ತು ಹೌದಿಗಳ ನಡುವಿನ ವೈಷಮ್ಯ ಹೆಚ್ಚುತ್ತಿರುವ ಹಾಗೂ ಹೌದಿ ಗುಂಪು ಸೌದಿ ನಗರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಕಳೆದ ವಾರವೂ ಯಾನ್ಬು ಪ್ರದೇಶದಲ್ಲಿರುವ ಅರಾಮ್ಕೊ ಸ್ಥಾವರಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್ ಗಳನ್ನು ಬಳಸಿ ದಾಳಿ ನಡೆಸಿರುವುದಾಗಿ ಹೌದಿಗಳು ಹೇಳಿಕೊಂಡಿದ್ದರು. ಆ ಸಂದರ್ಭದಲ್ಲಿ ತಾಯಿಫ್ ಮತ್ತು ಯಾನ್ಬು ಪ್ರದೇಶಗಳತ್ತ ಹಾರಿಸಲಾಗಿದ್ದ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿದಿರುವುದಾಗಿ ಸೌದಿ ಅರೇಬಿಯಾ ತಿಳಿಸಿತ್ತು. ಆದರೆ, ಅರಾಮ್ಕೊ ಸ್ಥಾವರಗಳಿಗೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿರಲಿಲ್ಲ.