‘ಗಾಝಾಗೆ ಮಾಡಿರುವ ಹಾನಿಯನ್ನು ನೋಡಿ’: Google Earthನಲ್ಲಿನ ವಿನಾಶದ ಚಿತ್ರ ಹಂಚಿಕೊಂಡ ನಟಿ ಆ್ಯಂಜಲೀನಾ ಜೋಲಿ
ನಟಿ ಏಂಜಲೀನಾ ಜೋಲೀ | Photo Credit : angelinajolie \ instagram.com
ಲಾಸ್ ಏಂಜಲೀಸ್: ಗಾಝಾದಾದ್ಯಂತ ಆಗಿರುವ ವಿನಾಶದ ಪ್ರಮಾಣವನ್ನು ತೋರಿಸುವ Google Earthನ ಉಪಗ್ರಹ ಚಿತ್ರಗಳನ್ನು ಅಮೆರಿಕದ ನಟಿ ಆ್ಯಂಜಲೀನಾ ಜೋಲಿ ಹಂಚಿಕೊಂಡಿದ್ದಾರೆ. ಗಾಝಾದ ವಿವಿಧ ಪ್ರದೇಶಗಳ ಪರಿಸ್ಥಿತಿಯನ್ನು ತೋರಿಸುವ ‘ಮೊದಲು ಮತ್ತು ನಂತರದ’ ಚಿತ್ರಗಳನ್ನು ಅವರು Xನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನೀವು ಈಗ Google Earth ತೆರೆದು ಗಾಝಾಗೆ ಮಾಡಿರುವ ಹಾನಿಯನ್ನು ನೋಡಬಹುದು’ ಎಂದು ಜೋಲೀ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
‘ಇಡೀ ನೆರೆಹೊರೆಗಳು ಅವಶೇಷಗಳಾಗಿ ಮಾರ್ಪಟ್ಟಿವೆ. ಮನೆಗಳು, ಶಾಲೆಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು, ರಸ್ತೆಗಳು, ನೀರು ಮತ್ತು ನೈರ್ಮಲ್ಯ ವ್ಯವಸ್ಥೆಗಳು ಸೇರಿದಂತೆ ಜನರು ಬದುಕಲು ಅವಲಂಬಿಸಿರುವ ಮೂಲಸೌಕರ್ಯಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ’ ಎಂದು ಅವರು ಹೇಳಿದ್ದಾರೆ.
ಗಾಝಾದಲ್ಲಿ ಸುಮಾರು 19.8 ಲಕ್ಷ ಜನರಿಗೆ ಮಾನವೀಯ ನೆರವಿನ ಅಗತ್ಯವಿದೆ ಎಂದು ಜೋಲೀ ತಿಳಿಸಿದ್ದಾರೆ. ಆದರೆ ‘ಸಹಾಯ ಮತ್ತು ಆಶ್ರಯ ಸಾಮಗ್ರಿಗಳು ನಿರ್ಬಂಧಗಳು ಹಾಗೂ ವಿಳಂಬಗಳನ್ನು ಎದುರಿಸುತ್ತಲೇ ಇವೆ’ ಎಂದು ಅವರು ಗಮನಸೆಳೆದಿದ್ದಾರೆ.