ಫ್ಲೈದುಬೈ ವಿಮಾನ ವಶಪಡಿಸಿಕೊಳ್ಳಲು ಯತ್ನಿಸಿದ್ದ ಸಹ ಪೈಲಟ್: UAE ತನಿಖಾ ತಂಡ ಮಾಹಿತಿ
Photo Credit : PTI
ಅಬು ಧಾಬಿ: ಟೆಲ್ ಅವೀವ್‍ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಸಿಬ್ಬಂದಿ ವರ್ಗದಲ್ಲಿದ್ದ ಒಮನ್ ಮೂಲದ ಸಹ-ಪೈಲಟ್‍ನ ಹಿನ್ನೆಲೆ, ಉದ್ದೇಶ ಮತ್ತು ಸಂಪರ್ಕಗಳ ಕುರಿತು ಆಸ್ಟ್ರೇಲಿಯಾ, ಇಸ್ರೇಲ್ ಮತ್ತು ಯುಎಇ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸಹ ಪೈಲಟ್ ಭಯೋತ್ಪಾದಕ ಕೃತ್ಯ ಎಸಗಲು ಯತ್ನಿಸಿದ್ದಾನೆ ಎಂಬುದು ತನ್ನ ತನಿಖೆಯಿಂದ ತಿಳಿದುಬಂದಿದೆ ಎಂದು ತನಿಖೆಯ ನೇತೃತ್ವ ವಹಿಸಿರುವ ಯುಎಇ ತಿಳಿಸಿದೆ. ಸಹ ಪೈಲಟ್ ಕಾಕ್‍ಪಿಟ್‍ನಲ್ಲಿ ಕ್ಯಾಪ್ಟನ್ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ವಿಮಾನದ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದನೆಂದು ಯುಎಇ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್ ಶಮ್ಸಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್ ಪಡೆಯ ಭಯೋತ್ಪಾದನಾ ನಿಗ್ರಹ ತಂಡವು ಆತನಿಗೆ ಆಸ್ಟ್ರೇಲಿಯಾದೊಂದಿಗಿದ್ದ ಸಂಪರ್ಕಗಳನ್ನು ಪರಿಶೀಲಿಸುತ್ತಿದೆ ಎಂದು ಆಸ್ಟ್ರೇಲಿಯನ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ವರದಿ ಮಾಡಿದೆ. ಆ ಸಹ ಪೈಲಟ್‍ಗೆ 2014ರಲ್ಲಿ ಸ್ಟೂಡೆಂಟ್ ವೀಸಾ ನೀಡಲಾಗಿತ್ತು ಮತ್ತು ದೇಶ ತೊರೆಯುವ ಮೊದಲು ಆತ 2015 ರಿಂದ 2017 ರವರೆಗೆ ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಿದ್ದ. ಬಳಿಕ ಆತ ಯಾವುದೇ ಕೋರ್ಸ್‍ಗೆ ದಾಖಲಾಗದ ಕಾರಣ ವೀಸಾಗೆ ಅರ್ಹನಾಗಿರಲಿಲ್ಲ, ಹೀಗಾಗಿ 2019ರಲ್ಲಿ ಆತನ ವೀಸಾವನ್ನು ರದ್ದುಗೊಳಿಸಲಾಯಿತು ಎಂದು ಎಬಿಸಿ ವರದಿ ತಿಳಿಸಿದೆ.
ಯುಎಇ, ಆಸ್ಟ್ರೇಲಿಯಾ ಮತ್ತು ಇಸ್ರೇಲ್‍ನ ತನಿಖಾಧಿಕಾರಿಗಳು ಘಟನೆಯ ಸಂಪೂರ್ಣ ವಿವರಗಳು, ಸಹ-ಪೈಲಟ್‍ನ ಉದ್ದೇಶಗಳು, ಆತನ ಹಿಂದಿನ ಸಂಪರ್ಕಗಳು ಮತ್ತು ಟೆಲ್ ಅವೀವ್‍ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಸಿಬ್ಬಂದಿ ತಂಡಕ್ಕೆ ಆತ ಹೇಗೆ ಬಂದ ಎಂಬ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.
ಹಲವು ಮಾಧ್ಯಮಗಳು ಈ ಸಹ ಪೈಲಟ್‍ನನ್ನು ಒಮನ್ ಪ್ರಜೆಯಾದ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಿವೆ, ಆದರೆ ಆತನ ಗುರುತನ್ನು ಅಧಿಕೃತವಾಗಿ ಇನ್ನೂ ದೃಢೀಕರಿಸಲಾಗಿಲ್ಲ.
ಆರೋಪ ತಿರಸ್ಕರಿಸಿದ ಇರಾನ್
ಫ್ಲೈದುಬೈ ಪ್ರಯಾಣಿಕ ವಿಮಾನದಲ್ಲಿ ನಡೆದ ಭದ್ರತಾ ಘಟನೆಗೆ ಇರಾನ್ ಸಂಪರ್ಕವಿದೆ ಎಂಬ ಆರೋಪಗಳನ್ನು ಇರಾನ್ ತಿರಸ್ಕರಿಸಿದ್ದು, ಇದು ಸೃಷ್ಟಿಸಿದ ಸಾಕ್ಷ್ಯಗಳನ್ನು ಆಧರಿಸಿದ ಸುಳ್ಳು ಪ್ರತಿಪಾದನೆ ಎಂದು ಖಂಡಿಸಿದೆ.
ಬ್ರಿಟನ್ ಮತ್ತು ಇತರ ದೇಶಗಳು ಇರಾನ್ ಅನ್ನು ಈ ಘಟನೆಗೆ ಜೋಡಿಸಲು ನಡೆಸುತ್ತಿರುವ ಪ್ರಯತ್ನಗಳು ಇರಾನ್ ವಿರುದ್ಧದ ವ್ಯಾಪಕ ಪ್ರಚಾರದ ಭಾಗವಾಗಿದೆ. ಈ ಆರೋಪಗಳು ಇರಾನ್ ಅನ್ನು ಇಡೀ ವಿಶ್ವಕ್ಕೆ ಬೆದರಿಕೆ ಎಂದು ಬಿಂಬಿಸಲು ಬಳಸುವ ಹಳೆಯ ತಂತ್ರವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಖಾಯಿ ರವಿವಾರ ಹೇಳಿದ್ದಾರೆ.
ವಿದೇಶಿ ಪೈಲಟ್‍ಗಳ ಹಿನ್ನೆಲೆ ಪರಿಶೀಲನೆ ಮಾಡುವುದಿಲ್ಲ: ಇಸ್ರೇಲ್
ದೇಶದೊಳಗೆ ಹಾರಾಟ ನಡೆಸುವ ವಿದೇಶಿ ಪೈಲಟ್‍ಗಳ ಹಿನ್ನೆಲೆ ಪರಿಶೀಲನೆಯನ್ನು ತಾವು ನಡೆಸುವುದಿಲ್ಲ ಎಂದು ಇಸ್ರೇಲ್‍ನ ಸಾರಿಗೆ ಸಚಿವಾಲಯ ಒಪ್ಪಿಕೊಂಡಿದ್ದು, ಇಂತಹ ವಿಮಾನ ಪ್ರಯಾಣಗಳು ಶೇ.100ರಷ್ಟು ಸುರಕ್ಷಿತ ಎಂದು ಭರವಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ವಿದೇಶಿ ಪೈಲಟ್‍ಗಳ ಹಿನ್ನೆಲೆ ಪರಿಶೀಲನೆ ನಡೆಸಲು ತಮ್ಮ ಬಳಿ ಸಂಪನ್ಮೂಲಗಳಿಲ್ಲದ ಕಾರಣ, ಘಟನೆಗೆ ಮುನ್ನ ನಡೆದ ಭದ್ರತಾ ಲೋಪಗಳಿಗೆ ಸಚಿವಾಲಯ ಜವಾಬ್ದಾರಿಯಲ್ಲ ಎಂದು ಸಾರಿಗೆ ಸಚಿವೆ ಮಿರಿ ರೆಗೆವ್ ಹೇಳಿದ್ದಾರೆ. ಪೈಲಟ್‍ಗಳ ಪರಿಶೀಲನೆ ನಡೆಸಲು ವಿದೇಶಗಳಲ್ಲಿ ಸಿಬ್ಬಂದಿಯನ್ನು ನೇಮಿಸಿಲ್ಲ ಎಂದು ಸಚಿವಾಲಯದ ಭದ್ರತಾ ವಿಭಾಗವೂ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದೆ.