ರಶ್ಯಕ್ಕೆ ನೆರವು ಆರೋಪ: ಭಾರತ, ಚೀನಾ ಸಂಸ್ಥೆಗಳ ಮೇಲೆ ನಿರ್ಬಂಧಕ್ಕೆ ಇಯು ಪ್ರಸ್ತಾವನೆ
ಬ್ರಸೆಲ್ಸ್ : ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ನೆರವಾಗುತ್ತಿರುವ ಆರೋಪದಲ್ಲಿ ಭಾರತ, ಚೀನಾ ಮೂಲದ ಸಂಸ್ಥೆಗಳ ಸಹಿತ 25ಕ್ಕೂ ಹೆಚ್ಚು ಸಂಸ್ಥೆಗಳ ಮೇಲೆ ನಿರ್ಬಂಧ ಜಾರಿಗೆ ಯುರೋಪಿಯನ್ ಯೂನಿಯನ್ ಪ್ರಸ್ತಾವಿಸಿದೆ. ಇದೇ ಮೊದಲ ಬಾರಿಗೆ ಚೀನಾದ ಮೂರು ಸಂಸ್ಥೆಗಳನ್ನು ಇಯು ನಿಷೇಧ ವ್ಯಾಪ್ತಿಗೆ ಪರಿಗಣಿಸಲಾಗಿದೆ. ಹಾಂಗ್ಕಾಂಗ್, ಸರ್ಬಿಯಾ, ಭಾರತ ಮತ್ತು ಟರ್ಕಿಯ ಸಂಸ್ಥೆಗಳೂ ಇಯು ಪ್ರಸ್ತಾವಿಸಿದ ನಿರ್ಬಂಧ ಪಟ್ಟಿಯಲ್ಲಿವೆ. ಕಾನೂನು ಕಾರಣಗಳಿಗಾಗಿ ಸಂಸ್ಥೆಗಳನ್ನು ಹೆಸರಿಸಲಾಗಿಲ್ಲ.
ಪಟ್ಟಿಯಲ್ಲಿ ಸೇರಿರುವ ಸಂಸ್ಥೆಗಳೊಂದಿಗೆ ಯುರೋಪಿಯನ್ ಸಂಸ್ಥೆಗಳು ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ಉಕ್ರೇನ್ ಮೇಲಿನ ಯುದ್ಧದ ಬಳಿಕ ರಶ್ಯಕ್ಕೆ ಕೆಲವು ಸರಕು ಪೂರೈಕೆಯನ್ನು ಇಯು ನಿರ್ಬಂಧಿಸಿದೆ. ಈ ವಸ್ತುಗಳನ್ನು ಮೂರನೇ ದೇಶಗಳ ಮೂಲಕ ಪಡೆಯುವ ರಶ್ಯದ ಕ್ರಮಕ್ಕೆ ತಡೆಯೊಡ್ಡಲು ಹೊಸ ನಿರ್ಬಂಧಗಳನ್ನು ಪ್ರಸ್ತಾವಿಸಲಾಗಿದೆ. ಈ ಹಿಂದೆಯೂ ಚೀನಾದ ಹಲವು ಸಂಸ್ಥೆಗಳ ಮೇಲೆ ನಿರ್ಬಂಧಕ್ಕೆ ಇಯು ಪ್ರಸ್ತಾಪಿಸಿತ್ತು. ಆದರೆ ಕೆಲವು ಸದಸ್ಯ ದೇಶಗಳ ವಿರೋಧ ಮತ್ತು ರಶ್ಯಕ್ಕೆ ನಿರ್ಬಂಧಿತ ಸರಕು ಪೂರೈಸುವುದಿಲ್ಲ ಎಂಬ ಚೀನಾದ ಭರವಸೆಯ ಹಿನ್ನೆಲೆಯಲ್ಲಿ ನಿರ್ಬಂಧ ತಡೆಹಿಡಿಯಲಾಗಿತ್ತು. ಎಲ್ಲಾ ಸದಸ್ಯ ದೇಶಗಳ ಸಮ್ಮತಿಯಿದ್ದರೆ ಮಾತ್ರ ಯುರೋಪಿಯನ್ ಯೂನಿಯನ್ನ ನಿರ್ಬಂಧ ಜಾರಿಯಾಗುತ್ತದೆ.
ಚೀನಾದ ಮೂರು ಸಂಸ್ಥೆಗಳು, ಭಾರತ, ಶ್ರೀಲಂಕಾ, ಸರ್ಬಿಯಾ, ಕಝಕ್ಸ್ತಾನ, ಥೈಲ್ಯಾಂಡ್, ಟರ್ಕಿ ಮತ್ತು ಹಾಂಕಾಂಗ್ನ ತಲಾ 1 ಸಂಸ್ಥೆಗಳ ಸಹಿತ ಸುಮಾರು 25 ಸಂಸ್ಥೆಗಳು ಪ್ರಸ್ತಾವಿತ ಪಟ್ಟಿಯಲ್ಲಿವೆ. ಇದರಲ್ಲಿ ಬಹುತೇಕ ಸಂಸ್ಥೆಗಳು ನಿಷೇಧಿತ ತಂತ್ರಜ್ಞಾನಗಳನ್ನು, ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಮದು ಮಾಡಿಕೊಂಡು ರಶ್ಯಕ್ಕೆ ಮರು-ರಫ್ತು ಮಾಡುತ್ತಿವೆ ಎಂದು ಇಯು ವಕ್ತಾರರು ಹೇಳಿದ್ದಾರೆ.