×
Ad

ಅಫ್ಘಾನಿಸ್ತಾನ ಭೂಕಂಪ: 2,200 ದಾಟಿದ ಮೃತರ ಸಂಖ್ಯೆ

Update: 2025-09-05 12:50 IST

Photo credit: PTI

ಕಾಬೂಲ್: ರವಿವಾರ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,205ಕ್ಕೆ ಏರಿಕೆಯಾಗಿದ್ದು, 3,640 ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತವನ್ನು ಉಲ್ಲೇಖಿಸಿ ಗುರುವಾರ AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ರವಿವಾರ ರಾತ್ರಿ ಸ್ಥಳೀಯ ಕಾಲಮಾನ 11.47ಕ್ಕೆ ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿರುವ ಜಲಾಲಬಾದ್ ಬಳಿ 8 ಕಿಮೀ ಆಳದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬಹುತೇಕ ಸಾವುಗಳು ಕುನಾರ್ ಪ್ರಾಂತ್ಯದಿಂದ ವರದಿಯಾಗಿದ್ದು, ಈ ಭಾಗದಲ್ಲಿ 6,700ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.

ರವಿವಾರದಿಂದ ಈ ಪ್ರಾಂತ್ಯದಲ್ಲಿ ಹಲವಾರು ಭೂಕಂಪ ನಂತರದ ಕಂಪನಗಳು ಸಂಭವಿಸಿದ್ದು, ಗುರುವಾರ ಮತ್ತು ಶುಕ್ರವಾರದ ನಡುವಿನ 12 ಗಂಟೆಗಳ ಅವಧಿಯಲ್ಲಿ ಎರಡು ಪ್ರಬಲ ಭೂಕಂಪ ನಂತರದ ಕಂಪನಗಳು ಸಂಭವಿಸಿವೆ ಎಂದು ಜರ್ಮನ್ ಭೌಗೋಳಿಕ ವಿಜ್ಞಾನ ಸಂಶೋಧನಾ ಕೇಂದ್ರ ತಿಳಿಸಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗುರುವಾರ ಜಲಾಲಬಾದ್ ನ ನಂಗರ್ಹಾರ್ ಬಳಿ ಹೆಚ್ಚು ಆಳವಿಲ್ಲದ 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದಾದ ಕೆಲ ಗಂಟೆಗಳ ನಂತರ, ಈ ಪ್ರಾಂತ್ಯದಲ್ಲಿ 10 ಕಿಮೀ ಆಳದಲ್ಲಿ 5.4 ತೀವ್ರತೆಯ ಭೂಕಂಪ ನಂತರದ ಕಂಪನ ಸಂಭವಿಸಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಮೃತರ ಸಂಖ್ಯೆ 700ರಷ್ಟು ಹೆಚ್ಚಾಗಿದೆ. ರಕ್ಷಣಾ ತಂಡಗಳು ಅವಶೇಷಗಳಡಿ ಮೃತದೇಹಗಳಿಗಾಗಿನ ಶೋಧ ಮುಂದುವರಿಸಿರುವುದರಿಂದ, ಈ ಸಂಖ್ಯೆ ಮತ್ತಷ್ಟು ಅಧಿಕವಾಗುವ ಸಾಧ್ಯತೆ ಇದೆ ಎಂದು ತಾಲಿಬಾನ್ ಆಡಳಿತವನ್ನು ಉಲ್ಲೇಖಿಸಿ AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News