×
Ad

ಗಾಝಾದಲ್ಲಿ ಅನಸ್ ಅಲ್ ಶರೀಫ್ ಸಹಿತ ಅಲ್ ಜಝೀರಾದ ಐವರು ಪತ್ರಕರ್ತರ ಹತ್ಯೆ

"ಸತ್ಯವನ್ನು ತಪ್ಪಿಲ್ಲದೆ ಜಗತ್ತಿಗೆ ತಲುಪಿಸಲು ಹಿಂಜರಿಯಲಿಲ್ಲ" ಎಂದು ಕೊನೆಯ ಸಂದರ್ಶನದಲ್ಲಿ ಹೇಳಿದ್ದ ಪತ್ರಕರ್ತ ಅನಸ್ ಅಲ್ ಶರೀಫ್

Update: 2025-08-11 11:00 IST

Photo | NDTV

ಗಾಝಾ ನಗರ: ಇಸ್ರೇಲ್ ಸೇನೆಯು ಗಾಝಾ ನಗರದಲ್ಲಿ ಪತ್ರಕರ್ತರಿಗಾಗಿ ಸಿದ್ಧಪಡಿಸಿದ್ದ ಟೆಂಟ್ ಮೇಲೆ ನಡೆಸಿದ ಗುರಿ ದಾಳಿಯಲ್ಲಿ, ಅಲ್ ಜಝೀರಾ ಅರೇಬಿಕ್ ಚಾನೆಲ್‌ನ ವರದಿಗಾರ ಅನಸ್ ಅಲ್-ಶರೀಫ್ (28) ಸೇರಿದಂತೆ ಐದು ಮಂದಿ ಅಲ್ ಜಝೀರಾ ಸಿಬ್ಬಂದಿ ಮೃತಪಟ್ಟಿದ್ದಾರೆ.

ರವಿವಾರ ರಾತ್ರಿ ಗಾಝಾ ನಗರದ ಅಲ್-ಶಿಫಾ ಆಸ್ಪತ್ರೆಯ ಮುಖ್ಯ ಪ್ರವೇಶದ್ವಾರದ ಬಳಿ ನಡೆದ ಈ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ವರದಿಗಾರ ಮುಹಮ್ಮದ್ ಕ್ರೈಖೆ, ಕ್ಯಾಮೆರಾಮೆನ್ ಇಬ್ರಾಹಿಂ ಝಹೆರ್, ಮುಹಮ್ಮದ್ ನೌಫಲ್ ಮತ್ತು ಮೊಮೆನ್ ಅಲಿವಾ ಸೇರಿದ್ದಾರೆ.

ಎಪ್ರಿಲ್ 6ರಂದು ಅನಸ್ ಅಲ್ ಶರೀಫ್ ಅವರು ತಮ್ಮ ಕೊನೆಯ ಸಂದರ್ಶನದಲ್ಲಿ ಹೇಳಿದ್ದ ಮಾತುಗಳು ಈಗ ವೈರಲ್ ಆಗಿದೆ. “ನೋವು, ದುಃಖ ಮತ್ತು ನಷ್ಟವನ್ನು ಅನೇಕ ಬಾರಿ ಅನುಭವಿಸಿದ್ದೇನೆ. ಆದರೂ ಸತ್ಯವನ್ನು ತಪ್ಪಿಲ್ಲದೆ ಜಗತ್ತಿಗೆ ತಲುಪಿಸಲು ಹಿಂಜರಿಯಲಿಲ್ಲ. ನಮ್ಮ ಹತ್ಯೆಯನ್ನು ಮೌನವಾಗಿ ಒಪ್ಪಿಕೊಂಡವರನ್ನು ದೇವರು ಸಾಕ್ಷಿಯಾಗಿರಲಿ” ಎಂದು ಅವರು ಹೇಳಿದ್ದರು.

ದಾಳಿಗೆ ಕೆಲವೇ ಕ್ಷಣಗಳ ಮೊದಲು, ಇಸ್ರೇಲ್ ಗಾಝಾ ನಗರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ನಡೆಸಿದ ‘ಫೈರ್ ಬೆಲ್ಟ್’ ಬಾಂಬ್ ದಾಳಿಯ ಬಗ್ಗೆ ಅವರು ವರದಿ ಮಾಡಿದ್ದರು. ಕೊನೆಯ ವೀಡಿಯೋದಲ್ಲಿ ಕ್ಷಿಪಣಿ ದಾಳಿಗಳ ಅಬ್ಬರ, ಕತ್ತಲೆಯ ಆಕಾಶದಲ್ಲಿ ಕೆಂಬೆಳಕು, ಮತ್ತು ಭಯಾನಕ ಸದ್ದುಗಳು ಹಿನ್ನಲೆಯಲ್ಲಿ ಕೇಳಿಬರುತ್ತಿದ್ದವು. ಪತ್ನಿ ಬಯಾನ್ ಹಾಗೂ ಮಗ ಸಲಾಹ್, ಮಗಳು ಶಾಮ್‌ರನ್ನು ಬಿಟ್ಟುಹೋಗಬೇಕಾದ ದುಃಖವನ್ನೂ ಅವರು ವ್ಯಕ್ತಪಡಿಸಿದ್ದರು.

ಅಲ್ ಜಝೀರಾ ಮೀಡಿಯಾ ನೆಟ್‌ವರ್ಕ್ ಈ ಘಟನೆಯನ್ನು “ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸ್ಪಷ್ಟ ಹಾಗೂ ಪೂರ್ವಯೋಜಿತ ದಾಳಿ” ಎಂದು ಖಂಡಿಸಿದೆ. “ಗಾಝಾದ ಮೇಲೆ ನಡೆಯುತ್ತಿರುವ ದಾಳಿಯ ನಡುವೆ ನಡೆದ ಈ ಹತ್ಯೆ, ನಾಗರಿಕರ ಮೇಲೆ ನಡೆಯುತ್ತಿರುವ ಹತ್ಯಾಕಾಂಡ, ಬಲವಂತದ ಹಸಿವು ಮತ್ತು ಸಮುದಾಯಗಳ ನಾಶಕ್ಕೆ ಮತ್ತೊಂದು ಉದಾಹರಣೆ” ಎಂದು ಅಲ್ ಜಝೀರಾ ತಿಳಿಸಿದೆ.

ಅಂತಾರಾಷ್ಟ್ರೀಯ ಸಮುದಾಯವು ಪತ್ರಕರ್ತರ ಮೇಲೆ ನಡೆಯುತ್ತಿರುವ ಉದ್ದೇಶಪೂರ್ವಕ ದಾಳಿಗಳನ್ನು ತಕ್ಷಣ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಆಗ್ರಹಿಸಿದೆ. “ಅಪರಾಧಿಗಳಿಗೆ ಶಿಕ್ಷೆಯ ಕೊರತೆಯೇ ಇಸ್ರೇಲ್‌ನ ದೌರ್ಜನ್ಯಕ್ಕೆ ಧೈರ್ಯ ತುಂಬುತ್ತಿದೆ” ಎಂದು ಅಲ್ ಜಝೀರಾ ಆರೋಪಿಸಿದೆ.

ಘಟನೆಯ ವೇಳೆ ಕೇವಲ ಒಂದು ಬ್ಲಾಕ್ ದೂರದಲ್ಲಿದ್ದ ಅಲ್ ಜಝೀರಾ ಇಂಗ್ಲಿಷ್ ಚಾನೆಲ್ ವರದಿಗಾರ ಹನಿ ಮಹಮೂದ್, “ಅಲ್-ಶರೀಫ್ ಸಾವಿನ ಬಗ್ಗೆ ವರದಿ ಮಾಡುವುದು ನನ್ನ ವೃತ್ತಿ ಜೀವನದ ಅತ್ಯಂತ ಕಠಿಣ ಕ್ಷಣ” ಎಂದು ಕಣ್ಣೀರಿಟ್ಟರು. ಗಾಝಾದಲ್ಲಿ ಹಸಿವು, ಕ್ಷಾಮ ಮತ್ತು ಅಪೌಷ್ಟಿಕತೆಯ ಬಗ್ಗೆ ನಿರಂತರವಾಗಿ ವರದಿ ಮಾಡಿದ್ದಕ್ಕಾಗಿ ಅವರನ್ನು ಗುರಿಯಾಗಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News